ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಜಿಲ್ಲೆಯ ಹನೂರ ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಹತ್ತುತ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ್ದು, ಹತ್ತು ವರ್ಷದ ಬಾಲಕ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾನೆ.
ಚಾಮರಾಜನಗರದಲ್ಲಿ ಚಿರತೆ ದಾಳಿಗೆ ಮತ್ತೊಂದು ಬಲಿಯಾಗಿದ್ದು, ಬೆಟ್ಟ ಹತ್ತೋದಕ್ಕೆ ಜನ ಭಯಪಡುತ್ತಿದ್ದಾರೆ. ಕುಟುಂಬದವರ ಜೊತೆ ಬಂದ ಹತ್ತು ವರ್ಷದ ಬಾಲಕ ಹರ್ಷಿತ್ ಮೇಲೆ ಚಿರತೆ ದಾಳಿ ಮಾಡಿದೆ.
ನಾಗಮಲೆ ಕ್ಷೇತ್ರಕ್ಕೆ ಪೋಷಕರ ಜೊತೆ ಹೋಗ್ತಿದ್ದ ಹರ್ಷಿತ್ ಮೇಲೆ ಚಿರತೆ ಎರಗಿದೆ. ಕುಟುಂಬದವರ ಎದುರಿಗೇ ಬಾಲಕನನ್ನು ಹೊತ್ತುಕೊಂಡು ಹೋಗಿ ಕೊಂದು ಹಾಕಿದೆ. ಅರ್ಧ ಗಂಟೆಯ ನಂತರ ಬಾಲಕನ ಮೃತದೇಹ ಸಿಕ್ಕಿದೆ.
ಕುತ್ತಿಗೆ ಹಾಗೂ ಇತರ ಭಾಗಗಳಲ್ಲಿ ಚಿರತೆ ಕಚ್ಚಿ ದಾಳಿ ಮಾಡಿ ಕೊಂದಿದೆ. ಅರಣ್ಯ ವೀಕ್ಷಕರು ಸ್ಥಳಕ್ಕೆ ತಲುಪಿ ಮಾಹಿತಿ ಪಡೆದಿದ್ದಾರೆ. ಮಗನೊಂದಿಗೆ ದೇಗುಲಕ್ಕೆ ಬಂದು ಈ ರೀತಿ ಆಯ್ತು ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.



