ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ವಿಜಯವಾಡದ ಬಳಿ ಚಲಿಸುವ ರೈಲಿನಲ್ಲಿ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ, ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಮೂವರು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಹೆಣ್ಣು ಮಗುವಿನ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಸಲುವಾಗಿ ಹಾಸನದಿಂದ ಉತ್ತರ ಪ್ರದೇಶದ ವಾರಣಾಸಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಡಾ. ರಶ್ಮಿ ಬಿಲಗಿ, ಡಾ. ಶಾಹಿನ್ ಎಂ. ಮತ್ತು ಡಾ. ಲತಾಶ್ರೀ ಎನ್. ಎಂಬ ಮೂವರು ಪಿಜಿ ವೈದ್ಯರು ಈ ಅದ್ಭುತ ಸಾಹಸ ಮಾಡಿದ್ದಾರೆ.
ರೈಲು ವಿಜಯವಾಡದ ಬಳಿ ಚಲಿಸುತ್ತಿದ್ದಾಗ ಗರ್ಭಿಣಿಯೊಬ್ಬರಿಗೆ ಹಠಾತ್ ಭೀಕರ ಹೆರಿಗೆ ನೋವು ಕಾಣಿಸಿಕೊಂಡು ಗರ್ಭಾಶಯದಲ್ಲಿದ್ದ ನೀರು ಹೊರಬರಲಾರಂಭಿಸಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗದ ಕಾರಣ ಮೂವರೂ ವೈದ್ಯರು ರೈಲಿನಲ್ಲೇ ಹೆರಿಗೆಗೆ ಮುಂದಾದರು. ಹೆರಿಗೆಯ ಸಮಯದಲ್ಲಿ ಮಗುವಿನ ಕುತ್ತಿಗೆಗೆ ಹೊಕ್ಕುಳಬಳ್ಳಿ ಗಟ್ಟಿಯಾಗಿ ಸುತ್ತಿಕೊಂಡಿರುವುದನ್ನು ಕಂಡು ವೈದ್ಯರು ಗಾಬರಿಯಾಗದೆ, ಅತ್ಯಂತ ಚಾಣಾಕ್ಷತನದಿಂದ ಹೆರಿಗೆಗೂ ಮುನ್ನ ಮಗುವಿನ ತಲೆಯ ಮೇಲಿದ್ದ ಬಳ್ಳಿಯನ್ನು ಸಡಿಲಗೊಳಿಸಿದರು. ರೈಲಿನಲ್ಲಿ ಯಾವುದೇ ಸುಧಾರಿತ ವೈದ್ಯಕೀಯ ಕಿಟ್ ಇಲ್ಲದ ಕಾರಣ, ಅಲ್ಲೇ ಲಭ್ಯವಿದ್ದ ಸೀಮಿತ ವಸ್ತುಗಳನ್ನು ಬಳಸಿ, ಶೇವಿಂಗ್ ಬ್ಲೇಡ್ ಮತ್ತು ಶುದ್ಧ ದಾರದಿಂದ ಹೊಕ್ಕುಳಬಳ್ಳಿಯನ್ನು ಬಿಗಿಗೊಳಿಸಿ ಅತ್ಯಂತ ಯಶಸ್ವಿಯಾಗಿ ಕತ್ತರಿಸಿದರು.
ಇದನ್ನೂ ಓದಿ:
ವಿಜಯವಾಡ ಆಸ್ಪತ್ರೆಗೆ ಸ್ಥಳಾಂತರ:
ವೈದ್ಯರ ಯಶಸ್ವಿ ಶ್ರಮದ ಫಲವಾಗಿ ಮಹಿಳೆ ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂದಿನ ನಿಲ್ದಾಣ ಬರುವವರೆಗೂ ತಾಯಿ ಮತ್ತು ಮಗುವಿನ ಸ್ಥಿತಿಯನ್ನು ನಿರಂತರವಾಗಿ ಉಸ್ತುವಾರಿ ನೋಡಿಕೊಂಡ ವೈದ್ಯರು, ಬಳಿಕ ವಿಜಯವಾಡ ನಿಲ್ದಾಣದಲ್ಲಿ ಸಿದ್ಧವಿದ್ದ ಆಂಬ್ಯುಲೆನ್ಸ್ ಮೂಲಕ ಇಬ್ಬರನ್ನೂ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಸದ್ಯ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು, ಈ ಮೂವರು ಮಹಿಳಾ ವೈದ್ಯರ ಅದ್ಭುತ ಧೈರ್ಯ ಮತ್ತು ವೃತ್ತಿಪರತೆಗೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.



