May 11, 2026
Monday, May 11, 2026
spot_img

ಮೈದಾನದಲ್ಲೇ ಕಿತ್ತಾಡಿಕೊಂಡ ಮುಂಬೈ ಆಟಗಾರರು: ಸೋಲಿಗೆ ಕಾರಣವಾಯಿತೇ ಆ ಒಂದು ‘ತಪ್ಪು ಗ್ರಹಿಕೆ’?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಅಖಾಡದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯವೆಂದರೆ ಅಲ್ಲಿ ರನ್ ಮಳೆ ಮಾತ್ರವಲ್ಲ, ಭಾವನೆಗಳ ಅಲೆ ಕೂಡ ಇರುತ್ತದೆ. ಇತ್ತೀಚೆಗೆ ನಡೆದ ಪಂದ್ಯದಲ್ಲಿ ಇಂತಹದ್ದೇ ಒಂದು ನಾಟಕೀಯ ಘಟನೆಗೆ ಕ್ರಿಕೆಟ್ ಲೋಕ ಸಾಕ್ಷಿಯಾಗಿದೆ. ಉತ್ತಮ ಫೀಲ್ಡಿಂಗ್ ಮೂಲಕ ಗಮನ ಸೆಳೆಯಬೇಕಿದ್ದ ಮುಂಬೈ ಆಟಗಾರರು, ಮೈದಾನದಲ್ಲೇ ಪರಸ್ಪರ ಕಿತ್ತಾಡುವ ಮೂಲಕ ಸುದ್ದಿಯಾಗಿದ್ದಾರೆ.

ಪಂದ್ಯದ ನಿರ್ಣಾಯಕ ಹಂತದಲ್ಲಿ ಅಂದರೆ 18ನೇ ಓವರ್‌ನಲ್ಲಿ ಆರ್‌ಸಿಬಿ ಬ್ಯಾಟರ್ ಕೃನಾಲ್ ಪಾಂಡ್ಯ ಬಾರಿಸಿದ ಚೆಂಡನ್ನು ಬೌಂಡರಿ ಗೆರೆಯ ಬಳಿ ನಮನ್ ಧೀರ್ ಅದ್ಭುತವಾಗಿ ಹಿಡಿದರು. ಆದರೆ, ಸಮತೋಲನ ಕಳೆದುಕೊಂಡು ಬೌಂಡರಿ ಗೆರೆ ದಾಟುವ ಆತಂಕದಲ್ಲಿದ್ದ ನಮನ್, ತಕ್ಷಣವೇ ಚೆಂಡನ್ನು ಸಮೀಪದಲ್ಲಿದ್ದ ತಿಲಕ್ ವರ್ಮಾ ಅವರತ್ತ ಎಸೆದರು.

ಇಲ್ಲಿ ನಮನ್ ಧೀರ್ ಅವರ ಕಾಲು ಬೌಂಡರಿ ಲೈನ್ ಮುಟ್ಟಿದೆ ಎಂದು ಭಾವಿಸಿದ ತಿಲಕ್ ವರ್ಮಾ, ಚೆಂಡನ್ನು ಹಿಡಿಯಲು ಮುಂದಾಗಲಿಲ್ಲ. ಆದರೆ ರಿಪ್ಲೇನಲ್ಲಿ ನಮನ್ ಧೀರ್ ಅವರ ಕಾಲು ಗೆರೆಗೆ ತಾಗಿರಲಿಲ್ಲ ಎಂಬುದು ಸ್ಪಷ್ಟವಾಯಿತು. ತಿಲಕ್ ಅವರ ಈ ಸಣ್ಣ ತಪ್ಪು ಗ್ರಹಿಕೆಯಿಂದಾಗಿ ಸುಲಭವಾಗಿ ಸಿಗಬೇಕಿದ್ದ ವಿಕೆಟ್ ಕೈತಪ್ಪಿದ್ದಲ್ಲದೆ, ಮುಂಬೈ ತಂಡಕ್ಕೆ ಭಾರಿ ಹೊಡೆತ ನೀಡಿತು.

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸಿಟ್ಟಿನಿಂದ ನಮನ್ ಧೀರ್ ಅವರು ತಿಲಕ್ ವರ್ಮಾ ಅವರ ಮೇಲೆ ಮೈದಾನದಲ್ಲೇ ಕಿರುಚಾಡಿದರು. ಇಬ್ಬರ ನಡುವೆ ನಡೆದ ಈ ಮಾತಿನ ಚಕಮಕಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು. ಆದರೂ ಸ್ವಲ್ಪ ಸಮಯದ ನಂತರ ತಿಲಕ್ ಅವರು ಹಸ್ತಲಾಘವ ಮಾಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಈ ಒಂದು ಕ್ಯಾಚ್ ಮಿಸ್ ಆದ ಬೆನ್ನಲ್ಲೇ ಕೃನಾಲ್ ಪಾಂಡ್ಯ ಮುಂದಿನ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನು ಆರ್‌ಸಿಬಿ ಕಡೆಗೆ ತಿರುಗಿಸಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ತಿಲಕ್ ವರ್ಮಾ ಅದ್ಭುತ ‘ಜಗ್ಲಿಂಗ್ ಕ್ಯಾಚ್’ ಹಿಡಿದು ಪ್ರಾಯಶ್ಚಿತ್ತ ಮಾಡಿಕೊಂಡರೂ, ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು.

ಕೊನೆಯ ಓವರ್‌ನಲ್ಲಿ ಎದೆಬಡಿತ ಹೆಚ್ಚಿಸುವಂತಹ ಹೋರಾಟ ಕಂಡುಬಂದಿತು. ಅಂತಿಮವಾಗಿ ಅಗತ್ಯವಿದ್ದ 15 ರನ್ ಬಾರಿಸುವ ಮೂಲಕ ಆರ್‌ಸಿಬಿ ತಂಡವು 2 ವಿಕೆಟ್‌ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿತು. ಮುಂಬೈ ಇಂಡಿಯನ್ಸ್ ತಂಡದ ಈ ಆಂತರಿಕ ಗೊಂದಲವು ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !