ಹೊಸದಿಗಂತ ಡಿಜಿಟಲ್ ಡೆಸ್ಕ್
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇನ ರಾಜಸ್ಥಾನದ ದೌಸಾ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಿಷಿಕೇಶದಿಂದ ಮಧ್ಯಪ್ರದೇಶದ ಇಂದೋರ್‌ಗೆ ಅತಿ ವೇಗವಾಗಿ ತೆರಳುತ್ತಿದ್ದ ಸ್ಲೀಪರ್ ಬಸ್ ಹಾಗೂ ಟ್ರೈಲರ್ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು ಮಹಿಳೆಯರು, ಮಕ್ಕಳು ಸೇರಿದಂತೆ 22 ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ.
ನಿದ್ದೆಯಲ್ಲಿದ್ದಾಗಲೇ ಬಂದಪ್ಪಳಿಸಿದ ಯಮನ ದೂತ
ತಡರಾತ್ರಿ ಸುಮಾರು 2:30 ರ ವೇಳೆಗೆ ದುರಂತ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಬಸ್ ಮತ್ತು ಟ್ರೈಲರ್ ಎರಡೂ ವಾಹನಗಳಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಮೃತರ ಪೈಕಿ ಐದು ಜನರು ಬೆಂಕಿಯ ಆಹುತಿಗೆ ಸಜೀವ ದಹನವಾಗಿದ್ದರೆ, ಇಬ್ಬರು ತಲೆಗೆ ಬಿದ್ದ ಬಲವಾದ ಪೆಟ್ಟಿನಿಂದ ಸಾವನ್ನಪ್ಪಿದ್ದಾರೆ. ಸದ್ಯ ಗಾಯಗೊಂಡವರನ್ನು ಚಿಕಿತ್ಸೆಗಾಗಿ ದೌಸಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ತಿಳಿದು ಬಂದಿದೆ.
ತಡವಾಗಿ ಬಂದ ರಕ್ಷಣಾ ಪಡೆ: ಸ್ಥಳೀಯರ ಆಕ್ರೋಶ
ಅಪಘಾತದ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಬರಲು ಕನಿಷ್ಠ ಒಂದು ಗಂಟೆ ತಡವಾಯಿತು ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ಇದರಿಂದಾಗಿಯೇ ಸಾವಿನ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಬಸ್‌ನ ಲಗೇಜ್ ಕಂಪಾರ್ಟ್‌ಮೆಂಟ್‌ನಲ್ಲಿ ಭಾರಿ ಪ್ರಮಾಣದ ಸಿಗರೇಟ್ ಪ್ಯಾಕೆಟ್‌ಗಳನ್ನು ತುಂಬಿಸಲಾಗಿತ್ತು, ಇದು ಬೆಂಕಿ ವೇಗವಾಗಿ ಇಡೀ ಬಸ್‌ಗೆ ಆವರಿಸಲು ಮುಖ್ಯ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ:
ಚಾಲಕನ ನಿದ್ದೆ ಮಂಪರೇ ಕಾರಣ?
ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಅತಿ ವೇಗವಾಗಿ ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ನಿದ್ದೆಯ ಮಂಪರು ಆವರಿಸಿದ್ದೇ ಈ ದುರಂತಕ್ಕೆ ಕಾರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಆಡಳಿತವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಮೃತರ ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ



