ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಪ್ರಥಮ ಸ್ಥಾನ ಹೊಂದಿರುವ, ಸಾಂಸ್ಕೃತಿಕ ಪುನರುತ್ಥಾನದ ಸಂಕೇತವಾದ ಸೋಮನಾಥ ದೇವಾಲಯದ ಪುನರ್ನಿರ್ಮಾಣಗೊಂಡು ಈಗ 75 ವರ್ಷ ಸಂದಿದೆ. ಈ ಐತಿಹಾಸಿಕ ಅಮೃತ ಮಹೋತ್ಸವದ ಅಂಗವಾಗಿ ದೇಗುಲದಲ್ಲಿ ಆಯೋಜಿಸಲಾಗಿದ್ದ ವಿಶೇಷ ಧಾರ್ಮಿಕ ವಿಧಿವಿಧಾನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು.
ಈ ಮಹತ್ವದ ಕಾರ್ಯಕ್ರಮದ ಭಾಗವಾಗಿ ಪ್ರಧಾನಿಯವರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇಶದ ವಿವಿಧ 11 ಪವಿತ್ರ ಯಾತ್ರಾ ಸ್ಥಳಗಳಿಂದ ತರಲಾಗಿದ್ದ ಪುಣ್ಯಜಲವನ್ನು ಬಳಸಿ ಸೋಮನಾಥನಿಗೆ ಭಕ್ತಿಯಿಂದ ಕುಂಭಾಭಿಷೇಕ ನೆರವೇರಿಸಿದರು. ಇದು ಭಾರತದ ಏಕತೆ ಮತ್ತು ಆಧ್ಯಾತ್ಮಿಕ ಪರಂಪರೆಯ ಸಂಕೇತವಾಗಿ ಮೂಡಿಬಂತು.
ಧಾರ್ಮಿಕ ಕಾರ್ಯಕ್ರಮಗಳ ನಂತರ, ಭಾರತೀಯ ವಾಯುಪಡೆಯ ಹೆಮ್ಮೆಯ ‘ಸೂರ್ಯಕಿರಣ್’ ಏರೋಬ್ಯಾಟಿಕ್ ತಂಡವು ಆಕಾಶದಲ್ಲಿ ಅದ್ಭುತ ವೈಮಾನಿಕ ಪ್ರದರ್ಶನ ನೀಡಿತು. ಪ್ರಧಾನಿ ಮೋದಿ ಅವರು ಈ ರೋಮಾಂಚಕ ಸಾಹಸಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಇದೇ ವೇಳೆ ಸೋಮನಾಥನ ಶ್ರೀಮಂತ ಇತಿಹಾಸವನ್ನು ಸಾರುವ ವಿಶೇಷ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಪ್ರಧಾನಿಯವರು ಬಿಡುಗಡೆ ಮಾಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಂಘವಿ ಅವರು ಪ್ರಧಾನಿಯವರನ್ನು ಗೌರವಿಸಿದರು. ಸೋಮನಾಥಕ್ಕೆ ಭೇಟಿ ನೀಡುವ ಮುನ್ನ ಮೋದಿ ಅವರು ಭವ್ಯ ರೋಡ್ ಶೋ ನಡೆಸಿ ಜನರ ಹರ್ಷೋದ್ಗಾರಕ್ಕೆ ಸಾಕ್ಷಿಯಾದರು. ಸೋಮನಾಥದ ಕಾರ್ಯಕ್ರಮದ ನಂತರ ಅವರು ವಡೋದರಾಕ್ಕೆ ತೆರಳಿ ‘ಸರ್ದಾರ್ ಧಾಮ್ ಹಾಸ್ಟೆಲ್’ ಉದ್ಘಾಟಿಸಲಿದ್ದಾರೆ.



