ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಕಠ್ಮಂಡುವಿನಲ್ಲಿರುವ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಗ್ಗೆ ಭಾರೀ ವಿಮಾನ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇಸ್ತಾನ್‌ಬುಲ್‌ನಿಂದ ಆಗಮಿಸುತ್ತಿದ್ದ ಟರ್ಕಿಶ್ ಏರ್‌ಲೈನ್ಸ್ ವಿಮಾನವು ರನ್‌ವೇ ಮೇಲೆ ಇಳಿಯುವ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತ್ತು.
ಟರ್ಕಿಶ್ ಏರ್‌ಲೈನ್ಸ್ ವಿಮಾನವು ತನ್ನ ನಿಗದಿತ ಪ್ರಯಾಣದಂತೆ ಇಸ್ತಾನ್‌ಬುಲ್‌ನಿಂದ ಕಠ್ಮಂಡುವಿಗೆ ಆಗಮಿಸಿತ್ತು. ವಿಮಾನದಲ್ಲಿ 278 ಪ್ರಯಾಣಿಕರು ಹಾಗೂ 11 ಜನ ಸಿಬ್ಬಂದಿ ಸೇರಿ ಒಟ್ಟು 289 ಜನರಿದ್ದರು. ವಿಮಾನವು ರನ್‌ವೇ ಮೇಲೆ ಲ್ಯಾಂಡ್ ಆಗುತ್ತಿದ್ದಂತೆಯೇ, ಅದರ ಬಲಭಾಗದ ಚಕ್ರಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ತಕ್ಷಣ ಪೈಲಟ್‌ಗಳು ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ವಿಮಾನ ನಿಲ್ದಾಣದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಯಾವುದೇ ವಿಳಂಬವಿಲ್ಲದೆ ತುರ್ತು ನಿರ್ಗಮನದ ಮೂಲಕ ಎಲ್ಲ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಕೆಳಗಿಳಿಸಲಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಮತ್ತು ದೊಡ್ಡ ಮಟ್ಟದ ಅನಾಹುತವನ್ನು ತಪ್ಪಿಸಲಾಗಿದೆ.
ಕುತೂಹಲಕಾರಿ ಮತ್ತು ಆತಂಕಕಾರಿ ವಿಷಯವೆಂದರೆ, 2015 ರಲ್ಲಿ ಇದೇ ಟರ್ಕಿಶ್ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದು ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿತ್ತು. ಅಂದು ವಿಮಾನ ನಿಲ್ದಾಣವನ್ನು ಸತತ ನಾಲ್ಕು ದಿನಗಳ ಕಾಲ ಮುಚ್ಚಲಾಗಿತ್ತು. ಆ ಘಟನೆಯ ನೆನಪು ಮರುಕಳಿಸುವಂತಿದ್ದ ಇಂದಿನ ಘಟನೆಯು ಸದ್ಯ ಎಲ್ಲರಲ್ಲೂ ಭಯ ಮೂಡಿಸಿದೆ.
ಸದ್ಯಕ್ಕೆ ವಿಮಾನಯಾನ ಸಂಸ್ಥೆಯು ಈ ತಾಂತ್ರಿಕ ದೋಷದ ಕುರಿತು ಯಾವುದೇ ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.



