ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌಂದರ್ಯ ಎಂದರೆ ಕೇವಲ ಮೇಲ್ನೋಟದ ಮೆರುಗು ಮಾತ್ರವಲ್ಲ. ಅದು ನಮ್ಮ ತ್ವಚೆಯ ಆರೋಗ್ಯದ ಪ್ರತಿಬಿಂಬ. ಬದಲಾಗುವ ಹವಾಮಾನ, ಮಾಲಿನ್ಯ ಮತ್ತು ಆಂತರಿಕ ನಿರ್ಜಲೀಕರಣದಿಂದಾಗಿ ತ್ವಚೆಯು ತನ್ನ ನೈಸರ್ಗಿಕ ತೇವಾಂಶವನ್ನು ಕಳೆದುಕೊಂಡು ಡ್ರೈ ಹಾಗೂ ಜೀವಹೀನವಾಗುತ್ತದೆ. ಆದರೆ, ಸೂಕ್ತವಾದ ಪದಾರ್ಥಗಳನ್ನು ಒಳಗೊಂಡ ಸ್ಕಿನ್ಕೇರ್ ಉತ್ಪನ್ನಗಳನ್ನು ಬಳಸುವುದರಿಂದ ತ್ವಚೆಯನ್ನು ಮೃದು, ಹಾಗೂ ದಿನವಿಡೀ ಹೈಡ್ರೇಟ್ಡ್ ಇಡಬಹುದು.
ಸ್ಕಿನ್ಕೇರ್ನಲ್ಲಿರಲಿ ಈ ಇಂಗ್ರೀಡಿಯಂಟ್ಸ್
ಹೈಯಲುರೋನಿಕ್ ಆಸಿಡ್ (Hyaluronic Acid): ಇದನ್ನು ತ್ವಚೆಯ ‘ವಾಟರ್ ಸ್ಪಂಜ್’ ಎನ್ನಬಹುದು. ಇದು ತನ್ನ ತೂಕಕ್ಕಿಂತ 1000 ಪಟ್ಟು ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಚರ್ಮದ ಆಳಕ್ಕೆ ಹೋಗಿ ತೇವಾಂಶವನ್ನು ತುಂಬಿ, ತ್ವಚೆಯನ್ನು ಸದಾ ತಾಜಾವಾಗಿಡುತ್ತದೆ.
ಗ್ಲಿಸರಿನ್ (Glycerin): ಅತ್ಯಂತ ಹಳೆಯ ಇಂಗ್ರೀಡಿಯಂಟ್ಸ್. ಗಾಳಿಯಲ್ಲಿರುವ ತೇವಾಂಶವನ್ನು ಆಕರ್ಷಿಸಿ, ತ್ವಚೆಯ ಮೇಲ್ಮೈಗೆ ತಲುಪಿಸುವ ‘ಹ್ಯೂಮೆಕ್ಟೆಂಟ್’ ಆಗಿ ಇದು ಕೆಲಸ ಮಾಡುತ್ತದೆ. ಇದರಿಂದ ಚರ್ಮವು ತಕ್ಷಣವೇ ಮೃದುವಾಗುತ್ತದೆ.
ಸೆರಾಮೈಡ್ಗಳು (Ceramides): ಇವು ತ್ವಚೆಯ ರಕ್ಷಣಾ ಕವಚಗಳಿದ್ದಂತೆ. ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯಂಶ ಇಂಗಿಹೋಗದಂತೆ ತಡೆದು, ತೇವಾಂಶ ಹೊರಟುಹೋಗದಂತೆ ಬಾಗಿಲು ಮುಚ್ಚುವ ಕೆಲಸವನ್ನು ಇವು ಮಾಡುತ್ತವೆ.
ಅಲೋವೆರಾ (Aloe Vera): ನೈಸರ್ಗಿಕವಾಗಿ ಸಿಗುವ ಈ ದಿವ್ಯೌಷಧಿಯು ತ್ವಚೆಗೆ ತಂಪಿನ ಅನುಭವ ನೀಡುತ್ತದೆ. ಉರಿಯೂತವನ್ನು ಶಮನಗೊಳಿಸಿ ಚರ್ಮಕ್ಕೆ ನೈಸರ್ಗಿಕ ತೇವಾಂಶವನ್ನು ಒದಗಿಸುತ್ತದೆ.
ಶಿಯಾ ಬಟರ್ (Shea Butter), ಸ್ಕ್ವಾಲೇನ್ (Squalane): ಇವು ತ್ವಚೆಗೆ ಆಳವಾದ ಪೋಷಣೆ ನೀಡುತ್ತವೆ. ಅತ್ಯಂತ ಒಣ ಚರ್ಮ ಹೊಂದಿರುವವರಿಗೆ ಇವು ವರವಾಗಿದ್ದು, ರೇಷ್ಮೆಯಂತಹ ನಯವಾದ ಸ್ಪರ್ಶ ನೀಡುತ್ತವೆ.
ನಿಯಾಸಿನಮೈಡ್ (Niacinamide): ಇದು ತ್ವಚೆಯ ಟೆಕ್ಸ್ಚರ್ ಸರಿಪಡಿಸುವುದಲ್ಲದೆ, ಚರ್ಮದ ನೈಸರ್ಗಿಕ ತಡೆಗೋಡೆಯನ್ನು ಬಲಪಡಿಸಿ ತೇವಾಂಶವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
ನಿಮ್ಮ ದಿನನಿತ್ಯದ ಚರ್ಮದ ಆರೈಕೆಯಲ್ಲಿ ಈ ಅದ್ಭುತ ಇಂಗ್ರೀಡಿಯಂಟ್ಸ್ ಗಳಿರುವ ಮೊಯಿಶ್ಚರೈಸರ್, ಸೀರಮ್ ಅಥವಾ ಫೇಸ್ವಾಶ್ ಗಳನ್ನು ಆಯ್ಕೆ ಮಾಡಿ. ಇದರ ಜೊತೆಗೆ ದಿನಕ್ಕೆ ಕನಿಷ್ಠ 8-10 ಲೋಟ ನೀರು ಕುಡಿಯುವ ಅಭ್ಯಾಸ ನಿಮ್ಮ ತ್ವಚೆಯನ್ನು ಸದಾ ಯೌವನಯುತವಾಗಿ ಮತ್ತು ಮೃದುವಾಗಿಡುತ್ತದೆ.



