May 12, 2026
Tuesday, May 12, 2026
spot_img

ತರಕಾರಿ ಮಾರುವವರ ವೇಷದಲ್ಲಿ ಬಂದು ಮನೆಗೆ ಕನ್ನ ಹಾಕಿದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಹೊಸ ದಿಗಂತ ವರದಿ, ಬೆಳಗಾವಿ:

ತರಕಾರಿ ಮಾರುವವರ ವೇಷದಲ್ಲಿ ಬಂದು ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಪ್ರತ್ಯೇಕ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಮೂಲದವರು ಎಂದು ತಿಳಿದುಬಂದಿದೆ.

ಕಳ್ಳತನಕ್ಕೂ ಮೊದಲು ಏರಿಯಾಗಳಲ್ಲಿ ತರಕಾರಿ ಮಾರುವವರ ವೇಷದಲ್ಲಿ ಓಡಾಟ ನಡೆಸುತ್ತಿದ್ದ ಆರೋಪಿಗಳು, ಈ ವೇಳೆ ಬೀಗ ಹಾಕಿದ ಮನೆಗಳನ್ನು ಪತ್ತೆ ಮಾಡಿ ಬಳಿಕ ರಾತ್ರಿ ಗ್ಯಾಂಗ್ ಕಟ್ಟಿಕೊಂಡು ಬಂದು ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದರು.

ಈ ಕುರಿತು ಎಪಿಎಂಸಿ ಹಾಗೂ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು ಇದಕ್ಕಾಗಿ ಎರಡು ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.

ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರ ಮೂಲದ ದೇವೇಂದ್ರ ವಾಘಮೋರೆ, ಸಚಿನ್ ಗೌಳಿ, ಕಪಿಲ್ ಜಾಧವ್ ನನ್ನು ಬಂಧಿಸಲಾಗಿದ್ದು, 4.71 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಾಗ್ರಿ, ಎರಡು ಬೈಕ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ.

ಇನ್ನು ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಖತರ್ನಾಕ್ ಗ್ಯಾಂಗ್ ನ ಕಿಂಗ್ ಪಿನ್ ಅನ್ನೇ ಪೊಲೀಸರು ಬಂಧಿಸಿದ್ದು, ಉತ್ತರ ಪ್ರದೇಶ ಮೂಲದ ಮಿಂಟು ವಿಶ್ವಾಸ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 44 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ 290ಗ್ರಾಂ ಚಿನ್ನ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ.

ಈ ಎರಡೂ ಗ್ಯಾಂಗ್ ಶಿವಮೊಗ್ಗ, ಕಲಬುರ್ಗಿ ಪೊಲೀಸರು ಸೇರಿದಂತೆ ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶದ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದರು.

ಈ ಗ್ಯಾಂಗ್ ಕಳ್ಳತನ ಮಾಡಿದ್ದ ವಸುಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಗೋವಾಗೆ ತೆರಳಿ ಕೆಸಿನೋಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು.

ಮನೆಗಳ್ಳತನ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೇ ಅಲರ್ಟ್ ಆದ ಜಿಲ್ಲಾ ಪೊಲೀಸರು, ಯಾರೇ ಮನೆಗೆ ಬೀಗ ಹಾಕಿ ದೂರದ ಊರಿಗೆ ತೆರಳುವವರಿದ್ದರೂ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಅವರು ಮನೆಗೆ ವಾಪಾಸ್ ಆಗುವವರೆಗೂ ಪೊಲೀಸರು ಆ ಮನೆ ಮೇಲೆ ನಿಗಾ ಇಡುವ ಜೊತೆಗೆ, ನಿರಂತರವಾಗಿ ಗಸ್ತು ವ್ಯವಸ್ಥೆ ಕೂಡ ಮಾಡುವುದಾಗಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !