May 13, 2026
Wednesday, May 13, 2026
spot_img

ಸಿಎಂ ಆಗಿ ವಿಜಯ್ ಮೊದಲ ಅಗ್ನಿಪರೀಕ್ಷೆಯಲ್ಲಿ ಪಾಸ್! ವಿಶ್ವಾಸಮತ ಗೆದ್ದ ಟಿವಿಕೆ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿರುವ ನಟ, ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ವಿಧಾನಸಭೆಯಲ್ಲಿ ಭರ್ಜರಿ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. ಬುಧವಾರ ನಡೆದ ಬಹುಮತ ಸಾಬೀತು ಪ್ರಕ್ರಿಯೆಯಲ್ಲಿ ನಿರೀಕ್ಷೆಗೂ ಮೀರಿ ಬೆಂಬಲ ಗಳಿಸುವ ಮೂಲಕ ವಿಜಯ್ ತಮ್ಮ ಸರ್ಕಾರದ ಭದ್ರತೆಯನ್ನು ಖಚಿತಪಡಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೂ ಬಹುಮತಕ್ಕೆ ಬೇಕಿದ್ದ 118ರ ಗಡಿ ದಾಟಲು ಇತರ ಪಕ್ಷಗಳ ಬೆಂಬಲ ಅನಿವಾರ್ಯವಾಗಿತ್ತು. ಬುಧವಾರದ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ನ 5 ಶಾಸಕರು, ವಿಸಿಕೆ, ಸಿಪಿಐ, ಸಿಪಿಐ(ಎಂ) ಮತ್ತು ಐಯುಎಂಎಲ್ ಪಕ್ಷದ ತಲಾ ಇಬ್ಬರು ಶಾಸಕರು ಸೇರಿದಂತೆ ಒಟ್ಟು 144 ಸದಸ್ಯರು ವಿಜಯ್ ಪರ ಮತ ಚಲಾಯಿಸಿದ್ದಾರೆ. ವಿಶೇಷವೆಂದರೆ, ಎಐಎಡಿಎಂಕೆಯ 25 ಬಂಡಾಯ ಶಾಸಕರು ಕೂಡ ವಿಜಯ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ.

ವಿಶ್ವಾಸಮತಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ರಾಜ್ಯದ ಶೇ. 65ರಷ್ಟು ಮತದಾರರು ಟಿವಿಕೆ ವಿರುದ್ಧ ಮತ ಚಲಾಯಿಸಿದ್ದಾರೆ. ಒಟ್ಟು 4.93 ಕೋಟಿ ಮತಗಳಲ್ಲಿ ಕೇವಲ 1.72 ಕೋಟಿ ಮತಗಳು ಮಾತ್ರ ಅವರಿಗೆ ಲಭಿಸಿವೆ. ಜನರಿಗೆ ಈಗ ಸತ್ಯ ತಿಳಿಯುತ್ತಿದೆ” ಎಂದು ಟೀಕಿಸಿದರು. ಅಲ್ಲದೆ, ಒಂದು ಕಾಲದಲ್ಲಿ ವಿಜಯ್ ಟೀಕಿಸಿದ್ದ ಎಐಎಡಿಎಂಕೆ ನಾಯಕರನ್ನೇ ಈಗ ಸಚಿವ ಸ್ಥಾನದ ಆಮಿಷವೊಡ್ಡಿ ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಟಿವಿಕೆ ಮತ್ತು ಎಐಎಡಿಎಂಕೆ ಬಂಡಾಯ ಶಾಸಕರ ನಡುವಿನ ಒಳಸಂಚನ್ನು ಪ್ರಶ್ನಿಸಿದ ಉದಯನಿಧಿ ಸ್ಟಾಲಿನ್, ಡಿಎಂಕೆ ಸರ್ಕಾರದ ಜನಪದ ಯೋಜನೆಗಳನ್ನು ಸ್ಥಗಿತಗೊಳಿಸದಂತೆ ಮನವಿ ಮಾಡಿದರು. ಬಳಿಕ ಡಿಎಂಕೆ ಸದಸ್ಯರು ಸದನದಿಂದ ಹೊರನಡೆಯುವ (ಸಬಾತ್ಯಾಗ) ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಪ್ರತಿಪಕ್ಷಗಳ ಅನುಪಸ್ಥಿತಿಯಲ್ಲಿ ವಿಜಯ್ ಅತ್ಯಂತ ಸುಲಭವಾಗಿ ಬಹುಮತದ ಅಗ್ನಿಪರೀಕ್ಷೆಯಲ್ಲಿ ಗೆದ್ದು ಬೀಗಿದ್ದಾರೆ.

ಈ ಜಯದೊಂದಿಗೆ ತಮಿಳುನಾಡಿನಲ್ಲಿ ವಿಜಯ್ ಯುಗ ಅಧಿಕೃತವಾಗಿ ಗಟ್ಟಿಗೊಂಡಂತಾಗಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ರಾಜಕೀಯ ಸಮೀಕರಣಗಳು ಮತ್ತಷ್ಟು ಕುತೂಹಲ ಕೆರಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !