May 13, 2026
Wednesday, May 13, 2026
spot_img

ಜೆಟ್ ಇಂಧನ ದರ ಏರಿಕೆ ಎಫೆಕ್ಟ್: ವಿದೇಶಿ ವಿಮಾನ ಪ್ರಯಾಣ ಕಡಿತಗೊಳಿಸಿದ ಏರ್ ಇಂಡಿಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾಗತಿಕ ಮಟ್ಟದಲ್ಲಿ ವಿಮಾನ ಇಂಧನ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ತನ್ನ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಮುಂಬರುವ ಜೂನ್ ತಿಂಗಳಿನಿಂದ ಆಗಸ್ಟ್ ಅಂತ್ಯದವರೆಗೆ ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲು ಸಂಸ್ಥೆ ನಿರ್ಧರಿಸಿದೆ.

ಬುಧವಾರ ಏರ್ ಇಂಡಿಯಾ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಸುಮಾರು ಆರಕ್ಕೂ ಹೆಚ್ಚು ಪ್ರಮುಖ ಮಾರ್ಗಗಳಲ್ಲಿ ವಿಮಾನಗಳು ಸಂಚರಿಸುವುದಿಲ್ಲ. ಅವುಗಳೆಂದರೆ:

ದೆಹಲಿ – ಚಿಕಾಗೊ

ಮುಂಬೈ – ನ್ಯೂಯಾರ್ಕ್

ದೆಹಲಿ – ಶಾಂಘೈ

ಚೆನ್ನೈ – ಸಿಂಗಾಪುರ್
ಮತ್ತು ಇತರೆ ಎರಡು ಪ್ರಮುಖ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಕೇವಲ ಇಂಧನ ಬೆಲೆ ಏರಿಕೆ ಮಾತ್ರವಲ್ಲದೆ, ವಿವಿಧ ದೇಶಗಳಲ್ಲಿ ಮುಂದುವರಿದಿರುವ ವಾಯು ಸಂಚಾರ ನಿರ್ಬಂಧಗಳು ಸಹ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿವೆ. ಪ್ರಸ್ತುತ ಜೆಟ್ ಇಂಧನ ದರವು ಗಗನಕ್ಕೇರಿರುವುದು ವಿಮಾನಯಾನ ಸಂಸ್ಥೆಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್ ಜೆಟ್ ಒಳಗೊಂಡಿರುವ ವಿಮಾನಯಾನ ಸಂಸ್ಥೆಗಳ ಒಕ್ಕೂಟವು ಇಂಧನ ದರ ನಿಗದಿಪಡಿಸುವ ಸೂತ್ರದಲ್ಲಿ ಬದಲಾವಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ತುರ್ತು ಮನವಿ ಸಲ್ಲಿಸಿವೆ.

ಈ ಆರು ಮಾರ್ಗಗಳನ್ನು ಹೊರತುಪಡಿಸಿ, ಏರ್ ಇಂಡಿಯಾದ ಉಳಿದ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಏರ್ ಇಂಡಿಯಾ ಪ್ರತಿ ತಿಂಗಳು ಸುಮಾರು 1,200ಕ್ಕೂ ಅಧಿಕ ಅಂತರಾಷ್ಟ್ರೀಯ ವಿಮಾನಗಳನ್ನು ಆಪರೇಟ್ ಮಾಡುತ್ತದೆ. ಇದರಲ್ಲಿ ಉತ್ತರ ಅಮೆರಿಕಕ್ಕೆ 33, ಯುರೋಪ್‌ಗೆ 47, ಯುಕೆಗೆ 57 ಮತ್ತು ಪೂರ್ವ ಏಷ್ಯಾ ದೇಶಗಳಿಗೆ 158 ವಿಮಾನಗಳು ಪ್ರತಿ ವಾರ ಸಂಚರಿಸುತ್ತಿದ್ದು, ಇವುಗಳಲ್ಲಿ ಬಹುತೇಕ ವಿಮಾನಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಮುಂದಿನ ದಿನಗಳಲ್ಲಿ ಇಂಧನ ಬೆಲೆ ಮತ್ತು ವಾಯು ಸಂಚಾರ ನಿಯಮಗಳನ್ನು ಗಮನಿಸಿ ಮತ್ತೆ ಈ ವಿಮಾನ ಸೇವೆಗಳನ್ನು ಆರಂಭಿಸುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !