May 13, 2026
Wednesday, May 13, 2026
spot_img

ಬೆಳಗಾವಿಯಲ್ಲಿ ಗಡಿ ಕದನ: ಮಹಾನಗರ ಪಾಲಿಕೆ ಮುಂದೆ ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಹೊಸದಿಗಂತ ಬೆಳಗಾವಿ:

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದ ಕಿಚ್ಚು ಮತ್ತೊಮ್ಮೆ ತೀವ್ರಗೊಂಡಿದೆ. “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಐತಿಹಾಸಿಕ ನಿರ್ಣಯವನ್ನು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಮ್ಮತದಿಂದ ಅಂಗೀಕರಿಸಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದವು.

ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾನಗರ ಪಾಲಿಕೆ ಕಚೇರಿಯ ಎದುರು ಜಮಾಯಿಸಿದ ಸುಮಾರು 40ಕ್ಕೂ ಹೆಚ್ಚು ಹೋರಾಟಗಾರರು, ಎಂಇಎಸ್ ಮತ್ತು ಮರಾಠಿ ಪರ ಸಂಘಟನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಗಡಿ ವಿವಾದವನ್ನು ಜೀವಂತವಾಗಿಟ್ಟು ರಾಜಕೀಯ ಲಾಭ ಪಡೆಯುತ್ತಿರುವ ಸಂಘಟನೆಗಳಿಗೆ ಕಡಿವಾಣ ಹಾಕಲು ಪಾಲಿಕೆಯ ಅಧಿಕೃತ ನಿರ್ಣಯ ಅನಿವಾರ್ಯ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಪ್ರತಿಭಟನೆಯ ನೇತೃತ್ವವನ್ನು ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕುಡಿ, ಗಡಿನಾಡು ಕನ್ನಡಿಗರ ಸೇನೆಯ ಬಲರಾಮ್ ಮಾಸಿನಟ್ಟಿ, ಕರವೇ ಯುವ ಸೈನ್ಯದ ಬಾಲಪ್ಪ ಗುಡಗನಟ್ಟಿ, ಈಶ್ವರ್ ಗೌಡ ಪಾಟೀಲ್ ಹಾಗೂ ಸರ್ವೋದಯ ಸಂಘಟನೆಯ ಶ್ರೀನಿವಾಸ್ ತಾಲೂಕರ ವಹಿಸಿದ್ದರು.

ಪ್ರತಿಭಟನೆಯ ವೇಳೆ ನಾಟಕೀಯ ಬೆಳವಣಿಗೆಯೊಂದು ನಡೆಯಿತು. ಸರ್ವೋದಯ ಸಂಘಟನೆಯ ಶ್ರೀನಿವಾಸ್ ತಾಲೂಕರ ಅವರು ಸಾರ್ವಜನಿಕ ಶೌಚಾಲಯದಲ್ಲಿ ಅಡಗಿ ಕುಳಿತು, ದಿಢೀರನೆ ಪಾಲಿಕೆ ಸಭಾಂಗಣಕ್ಕೆ ನುಗ್ಗಲು ಪ್ರಯತ್ನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:

ಗಡಿ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ ಎಂದು ಪಾಲಿಕೆ ನಿರ್ಣಯಿಸಬೇಕು.

2005ರಲ್ಲಿ ಎಂಇಎಸ್ ನಿರ್ಣಯ ಕೈಗೊಂಡ ಮಾದರಿಯಲ್ಲೇ, ಈಗಿನ ಪಾಲಿಕೆ ಕೂಡ “ಬೆಳಗಾವಿ ಕರ್ನಾಟಕದ್ದು” ಎಂದು ಸ್ಪಷ್ಟಪಡಿಸಬೇಕು.

ಭಾಷಾ ವಿವಾದದ ಹೆಸರಿನಲ್ಲಿ ಅಭಿವೃದ್ಧಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಾಪೌರರು ಮತ್ತು ಉಪಮಹಾಪೌರರು ಹೋರಾಟಗಾರರ ಮನವಿ ಸ್ವೀಕರಿಸಿದರು. “ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು. ಆದರೆ, ತಕ್ಷಣವೇ ನಿರ್ಣಯಕ್ಕೆ ಪಟ್ಟು ಹಿಡಿದ ಪ್ರತಿಭಟನಾಕಾರರು ಮಳೆಯ ನಡುವೆಯೂ ಪ್ರತಿಭಟನೆ ಮುಂದುವರಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು 15ಕ್ಕೂ ಹೆಚ್ಚು ಹೋರಾಟಗಾರರನ್ನು ವಶಕ್ಕೆ ಪಡೆದು ಕೆಎಸ್ಆರ್ಪಿ ವಾಹನದಲ್ಲಿ ಪೊಲೀಸ್ ಕೇಂದ್ರ ಕಚೇರಿಗೆ ರವಾನಿಸಿದರು.

ಈ ಹೋರಾಟದಲ್ಲಿ ಕರವೇ ಮಹಿಳಾ ಘಟಕ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡು ಕನ್ನಡದ ಪರ ಧ್ವನಿ ಎತ್ತಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !