May 15, 2026
Friday, May 15, 2026
spot_img

CINE | ‘ಧುರಂಧರ್ 2’ ಒಟಿಟಿ ಅಬ್ಬರ: ಬಾಕ್ಸ್ ಆಫೀಸ್ ಸುನಾಮಿ ಬಳಿಕ ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಲಗ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ರಣವೀರ್ ಸಿಂಗ್ ಅಭಿನಯದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ‘ಧುರಂಧರ್ 2: ದಿ ರಿವೆಂಜ್’ ಈಗ ಒಟಿಟಿ ಪ್ರಿಯರನ್ನು ರಂಜಿಸಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಈ ಸಿನಿಮಾ, ಈ ವಾರವೇ ಡಿಜಿಟಲ್ ಪರದೆಯ ಮೇಲೆ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರ ಏಕಕಾಲದಲ್ಲಿ ಎರಡು ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಮೂಲಕ ಹೊಸ ಸಂಚಲನ ಮೂಡಿಸಿದೆ.

ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾ ದೊಡ್ಡ ಮಟ್ಟದ ವ್ಯವಹಾರ ನಡೆಸಿದ್ದು, ಭಾರತದ ಒಟಿಟಿ ಹಕ್ಕುಗಳನ್ನು ಜಿಯೋ ಹಾಟ್‌ಸ್ಟಾರ್ ಸಂಸ್ಥೆಯು ಸುಮಾರು 150 ಕೋಟಿ ರೂಪಾಯಿಗಳಿಗೆ ಖರೀದಿಸಿದೆ ಎಂದು ವರದಿಯಾಗಿದೆ. ಹೀಗಾಗಿ, ಭಾರತದ ಪ್ರೇಕ್ಷಕರು ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾತ್ರ ಈ ಚಿತ್ರವನ್ನು ನೋಡಲು ಸಾಧ್ಯ.

ಆದರೆ, ವಿದೇಶದಲ್ಲಿರುವ ಸಿನಿಪ್ರಿಯರಿಗಾಗಿ ನೆಟ್‌ಫ್ಲಿಕ್ಸ್ ಈ ಚಿತ್ರವನ್ನು ಪ್ರಸಾರ ಮಾಡಲಿದೆ. ಮೊದಲ ಭಾಗ ನೆಟ್‌ಫ್ಲಿಕ್ಸ್‌ನಲ್ಲಿ ಹಿಟ್ ಆಗಿದ್ದರಿಂದ, ಈ ಬಾರಿ ಭಾರತದ ಹೊರಗಿನ ಪ್ರೇಕ್ಷಕರಿಗೆ ಮಾತ್ರ ಅಲ್ಲಿ ಅವಕಾಶ ಕಲ್ಪಿಸಲಾಗಿದೆ.

ಥಿಯೇಟರ್‌ಗೆ ಹೋದವರಿಗಿಂತ ಒಟಿಟಿಯಲ್ಲಿ ನೋಡುವವರಿಗೆ ಈ ಬಾರಿ ಹೆಚ್ಚು ಕಿಕ್ ಸಿಗಲಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ 3 ಗಂಟೆ 49 ನಿಮಿಷಗಳ ಕಾಲ ಇತ್ತು. ಆದರೆ ಒಟಿಟಿಯಲ್ಲಿ ಇದು 3 ಗಂಟೆ 52 ನಿಮಿಷಗಳ ದೀರ್ಘಾವಧಿಯನ್ನು ಹೊಂದಿದೆ. ಅಂದರೆ, ಸೆನ್ಸಾರ್ ಮಂಡಳಿಯಿಂದ ಕತ್ತರಿ ಹಾಕಲಾಗಿದ್ದ ಅತೀ ಹಿಂಸಾತ್ಮಕ ದೃಶ್ಯಗಳು ಮತ್ತು ರೋಚಕ ಸಂಭಾಷಣೆಗಳನ್ನು ಒಳಗೊಂಡ ‘ರಾ ಆ್ಯಂಡ್ ಅನ್‌ಸೀನ್’ ವರ್ಷನ್ ಸ್ಟ್ರೀಮಿಂಗ್ ಆಗಲಿದೆ. ಇಂದು ಸಂಜೆಯೊಳಗೆ ಸಿನಿಮಾ ಲಭ್ಯವಾಗುವ ಸಾಧ್ಯತೆ ಇದೆ.

ಗಳಿಕೆಯ ವಿಚಾರದಲ್ಲಿ ‘ಧುರಂಧರ್ 2’ ಮೈಲಿಗಲ್ಲು ಸ್ಥಾಪಿಸಿದೆ. ಭಾರತದಲ್ಲಿ ಇದುವರೆಗೆ 1,144.56 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಮಾಡಿದ್ದು, ಗ್ರಾಸ್ ಕಲೆಕ್ಷನ್ 1,369 ಕೋಟಿ ದಾಟಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಚಿತ್ರವು 1,796.51 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಪ್ರಸ್ತುತ ಭಾರತದ ಅತಿ ಹೆಚ್ಚು ಗಳಿಕೆಯ ಚಿತ್ರಗಳ ಪಟ್ಟಿಯಲ್ಲಿರುವ ‘ಬಾಹುಬಲಿ 2’ (1,810 ಕೋಟಿ ರೂ.) ದಾಖಲೆಯನ್ನು ಈ ಸಿನಿಮಾ ಮುರಿಯುತ್ತದೆಯೇ ಎಂಬ ಕುತೂಹಲ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !