ಹೊಸದಿಗಂತ ವರದಿ ಬೆಳಗಾವಿ:
ಪ್ರತಿ ಟನ್ ಕಬ್ಬಿಗೆ 5,500 ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾಯುತ್ತಿದ್ದ ರೈತರ ಸಭೆ ಕೊನೆಗೂ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆರಂಭಗೊಂಡಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಬಹಳ ಹೊತ್ತಿನಿಂದ ಸಭೆಗಾಗಿ ಕಾಯುತ್ತಿದ್ದ ರೈತರನ್ನು ಬಳಿಕ ಜಿಲ್ಲಾ ಪಂಚಾಯಿತಿ ಕಚೇರಿಗೆ ಕರೆಯಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ರೈತರಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ನಿರೀಕ್ಷೆ ಹೆಚ್ಚಾಯಿತು.
ಸಭೆಯಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ 4,500 ರೂ ಹಾಗೂ ಹೆಚ್ಚುವರಿಯಾಗಿ 1,000 ಎಂಎಸ್‌ಪಿ ನಿಗದಿಪಡಿಸಬೇಕೆಂದು ಪಟ್ಟು ಹಿಡಿದರು. ಆದರೆ, ರೈತರು ಕೇಳಿದಷ್ಟು ಬೆಲೆ ನೀಡಲು ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆಗಳ ಮಾಲೀಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ಮಾತನಾಡಿ, ನಮ್ಮ ಬೇಡಿಕೆಗಳಿಗೆ ಇಂದೇ ನಿರ್ಧಾರ ಕೈಗೊಳ್ಳಬೇಕು. ನಿರ್ಧಾರವಾಗುವವರೆಗೆ ಕಾಯುತ್ತೇವೆ. ಇಲ್ಲವಾದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರು, ಜಿಪಂ ಸಿಇಒ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಅಲ್ಲಿಯ ವರೆಗೆ ನೀವುಗಳು ಕಾಯಬೇಕು, ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ನಾವುಗಳು ಸಭೆ ಮಾಡಿ ಎಷ್ಟು ಕಬ್ಬಿನ ದರ ನಿಗದಿ ಮಾಡಬೇಕೆಂದು ತಿಳಿಸುತ್ತೇವೆ ಎಂದರು.
ಸಭೆಯ ನಿರ್ಧಾರ ಹಾಗೂ ಮುಂದಿನ ಬೆಳವಣಿಗೆಗಳ ಕುರಿತು ರೈತರು ಕುತೂಹಲದಿಂದ ಕಾಯುತ್ತಿದ್ದಾರೆ.



