May 15, 2026
Friday, May 15, 2026
spot_img

CINE | ಅಭಿಮಾನಿಗಳ ನೆಚ್ಚಿನ ಪವನ್ ಕಲ್ಯಾಣ್ ಮತ್ತೆ ಕ್ಯಾಮೆರಾ ಮುಂದೆ ಬರೋದು ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ಆದರೆ, ಪವನ್ ಅವರು ಸದ್ಯಕ್ಕೆ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಮತ್ತು ಶೂಟಿಂಗ್‌ನಿಂದ ದೂರ ಉಳಿದಿರುವುದಕ್ಕೆ ಕೇವಲ ರಾಜಕೀಯ ಜವಾಬ್ದಾರಿ ಮಾತ್ರ ಕಾರಣವಲ್ಲ, ಬದಲಿಗೆ ಗಂಭೀರ ಆರೋಗ್ಯದ ಸಮಸ್ಯೆಗಳೂ ಇವೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

ವರದಿಗಳ ಪ್ರಕಾರ, ಪವನ್ ಕಲ್ಯಾಣ್ ಅವರು ಈ ಹಿಂದೆ ಸಿನಿಮಾ ಶೂಟಿಂಗ್‌ಗಳ ಸಮಯದಲ್ಲಿ ಸಾಹಸ ದೃಶ್ಯಗಳನ್ನು ಮಾಡುವಾಗ ಹಲವಾರು ಬಾರಿ ಪೆಟ್ಟು ಮಾಡಿಕೊಂಡಿದ್ದರು. ಅಂದಿನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಅವರು ಆ ಗಾಯಗಳನ್ನು ಸರಿಯಾಗಿ ಗಮನಿಸದೆ ನಿರ್ಲಕ್ಷಿಸಿದ್ದರು. ವರ್ಷಗಳ ಕಾಲ ಹಾಗೆಯೇ ಉಳಿದಿದ್ದ ಆ ಸಣ್ಣಪುಟ್ಟ ಗಾಯಗಳು ಮತ್ತು ಶರೀರದ ಮೇಲಾದ ಒತ್ತಡಗಳು ಈಗ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿವೆಯಂತೆ. ಈ ಬಗ್ಗೆ ಪವನ್ ಅವರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೂ ಚರ್ಚಿಸಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ಅವರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಸರಣಿ ಸಭೆಗಳು, ಕ್ಷೇತ್ರ ಭೇಟಿಗಳು ಮತ್ತು ಆಡಳಿತಾತ್ಮಕ ಕೆಲಸಗಳ ನಡುವೆ ಅವರಿಗೆ ಸರಿಯಾದ ವಿಶ್ರಾಂತಿ ಸಿಗುತ್ತಿಲ್ಲ. ಈ ಹಂತದಲ್ಲಿ ಮತ್ತೆ ಸಿನಿಮಾ ಶೂಟಿಂಗ್‌ನ ಅತಿಯಾದ ದೈಹಿಕ ಶ್ರಮದ ಕೆಲಸಗಳಿಗೆ ಕೈ ಹಾಕಿದರೆ ಆರೋಗ್ಯ ಮತ್ತಷ್ಟು ಬಿಗಡಾಯಿಸಬಹುದು ಎಂಬ ಆತಂಕ ವೈದ್ಯರು ಮತ್ತು ಅವರ ಆಪ್ತ ವಲಯದಲ್ಲಿದೆ. ಹೀಗಾಗಿ, ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಕ್ಯಾಮೆರಾ ಮುಂದೆ ಬರುವುದು ಬೇಡ ಎಂಬ ಸಲಹೆ ಅವರಿಗೆ ಸಿಕ್ಕಿದೆ.

ನಿರ್ದೇಶಕ ಸುರೇಂದರ್ ರೆಡ್ಡಿ ಅವರ ಸಿನಿಮಾದಲ್ಲಿ ಪವನ್ ನಟಿಸಬೇಕಿತ್ತು ಮತ್ತು ಈ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿದ್ದವು. ಆದರೆ, ಸದ್ಯಕ್ಕೆ ಪವನ್ ಅವರ ಮೊದಲ ಆದ್ಯತೆ ಆರೋಗ್ಯ ಮತ್ತು ಆಂಧ್ರಪ್ರದೇಶದ ಆಡಳಿತ. ಶೂಟಿಂಗ್ ಆರಂಭಿಸುವ ಮೊದಲು ತಮ್ಮ ದೈಹಿಕ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ಪಡೆಯಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ, ಅಭಿಮಾನಿಗಳು ಪವರ್ ಸ್ಟಾರ್ ಅವರನ್ನು ತೆರೆಯ ಮೇಲೆ ನೋಡಲು ಇನ್ನು ಕೆಲವು ಸಮಯ ಕಾಯಲೇಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !