ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಹಾಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಸದ್ಯ ಭಾರಿ ಕುತೂಹಲ ಮೂಡಿಸಿದೆ. ಪೂರ್ಣ ಪ್ರಮಾಣದ ರಾಜಕೀಯ ಜೀವನಕ್ಕೆ ಕಾಲಿಡುವ ಮುನ್ನ ವಿಜಯ್ ಅಭಿನಯಿಸುತ್ತಿರುವ ಕೊನೆಯ ಚಿತ್ರ ಇದಾಗಿದ್ದು, ಇದರ ಟೈಟಲ್ ಕಾರ್ಡ್ ವಿಷಯದಲ್ಲಿ ವಿಜಯ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ಚಿತ್ರದ ಆರಂಭದ ಟೈಟಲ್ ಕಾರ್ಡ್‌ನಲ್ಲಿ ವಿಜಯ್ ಅವರಿಗೆ ರಾಜಕೀಯ ಗೌರವ ಸೂಚಿಸುವಂತೆ ‘ಹಾನರೆಬಲ್ ಚೀಫ್ ಮಿನಿಸ್ಟರ್ ದಳಪತಿ ವಿಜಯ್’ ಎಂದು ಪ್ರದರ್ಶಿಸಲು ಚಿತ್ರತಂಡ ಯೋಜಿಸಿತ್ತು. ಆದರೆ, ಈ ಪ್ರಸ್ತಾಪವನ್ನು ವಿಜಯ್ ನಯವಾಗಿ ತಿರಸ್ಕರಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ರಂಗದ ನಡುವೆ ಸ್ಪಷ್ಟವಾದ ಗೆರೆ ಇರಬೇಕೆಂದು ಬಯಸಿರುವ ಅವರು, ದಶಕಗಳಿಂದ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ‘ದಳಪತಿ’ ಎಂಬ ಬಿರುದನ್ನೇ ಉಳಿಸಿಕೊಳ್ಳಲು ಸೂಚಿಸಿದ್ದಾರೆ.
ಅಭಿಮಾನಿಗಳು ತಮ್ಮನ್ನು ತೆರೆಯ ಮೇಲೆ ಹೇಗೆ ನೋಡಲು ಇಷ್ಟಪಡುತ್ತಾರೋ ಅದೇ ಶೈಲಿಯಲ್ಲಿ ಕಾಣಿಸಿಕೊಳ್ಳುವುದು ವಿಜಯ್ ಉದ್ದೇಶವಾಗಿದೆ. ‘ದಳಪತಿ’ ಎಂಬುದು ಕೇವಲ ಹೆಸರಲ್ಲ, ಅದು ಅಭಿಮಾನಿಗಳ ಭಾವನೆಯಾಗಿರುವುದರಿಂದ ತಮ್ಮ ಸಿನಿಮಾ ಪಯಣದ ಕೊನೆಯ ಚಿತ್ರದಲ್ಲೂ ಅದೇ ಹೆಸರಿನಿಂದ ಗುರುತಿಸಿಕೊಳ್ಳಲು ಅವರು ನಿರ್ಧರಿಸಿದ್ದಾರೆ.
ನಿರ್ದೇಶಕ ಹೆಚ್. ವಿನೋತ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಕಾಂಬಿನೇಷನ್‌ನ ಈ ಬಿಗ್ ಬಜೆಟ್ ಸಿನಿಮಾ ಸದ್ಯ ಸೆನ್ಸಾರ್ ಮಂಡಳಿಯ ಪ್ರಕ್ರಿಯೆಗಳು ಹಾಗೂ ದೃಶ್ಯಗಳ ಸೋರಿಕೆಯ ಕಾರಣದಿಂದಾಗಿ ವಿಳಂಬವಾಗಿದ್ದು, ಶೀಘ್ರದಲ್ಲೇ ಚಿತ್ರದ ನೂತನ ಬಿಡುಗಡೆ ದಿನಾಂಕ ಪ್ರಕಟವಾಗುವ ನಿರೀಕ್ಷೆಯಿದೆ.



