July 21, 2026
Tuesday, July 21, 2026
spot_img

ಸಾರಿಗೆ ಮುಷ್ಕರದ ಭೀತಿ: ಮೇ 20ರ ಬೃಹತ್ ‘ಸಾಧನಾ ಸಮಾವೇಶ’ ಪ್ರೀಪೋನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇ 20ರಿಂದ ಆರಂಭವಾಗಲಿರುವ ಸಾರಿಗೆ ನೌಕರರ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರದ ಭೀತಿಯ ಹಿನ್ನೆಲೆಯಲ್ಲಿ, ತುಮಕೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಮೂರು ವರ್ಷಗಳ ಬೃಹತ್ ‘ಸಾಧನಾ ಸಮಾವೇಶ’ವನ್ನು ಮೇ 19ಕ್ಕೆ ಮುಂಚಿತವಾಗಿ ಮರುನಿಗದಿಪಡಿಸಲಾಗಿದೆ.

ಮೇ 20ರಂದು ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯದಿದ್ದರೆ ಸಮಾವೇಶಕ್ಕೆ ಜನರನ್ನು ಕರೆತರಲು ತೊಂದರೆಯಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ತುರ್ತು ನಿರ್ಧಾರ ಕೈಗೊಳ್ಳಲಾಗಿದೆ.

ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೇ 20ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಬಸ್ ಮುಷ್ಕರಕ್ಕೆ ಕರೆ ನೀಡಿದೆ. ಈ ಮುಷ್ಕರ ಆರಂಭವಾದರೆ ಸಾರ್ವಜನಿಕ ಸಾರಿಗೆ ಸಂಪೂರ್ಣ ಸ್ತಬ್ಧಗೊಳ್ಳಲಿದ್ದು, ಸಮಾವೇಶಕ್ಕೆ ಬರುವ ಜನರಿಗೆ ತೀವ್ರ ತೊಂದರೆಯಾಗಬಹುದು ಎಂಬ ಮುನ್ನೆಚ್ಚರಿಕೆಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ವಿವಿಧ ಜಿಲ್ಲೆಗಳಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಹಾಗೂ ಸಾರ್ವಜನಿಕರನ್ನು ಸಮಾವೇಶಕ್ಕೆ ಕರೆತರಲು 2500ಕ್ಕೂ ಹೆಚ್ಚು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳನ್ನು ಬಳಸಲು ಸರ್ಕಾರ ಯೋಜಿಸಿತ್ತು. ಮೇ 20 ರಂದು ನೌಕರರು ಮುಷ್ಕರ ನಡೆಸಿದರೆ ಈ ಬಸ್‌ಗಳ ಲಭ್ಯತೆ ಇರುವುದಿಲ್ಲ. ಹಾಗಾಗಿ ಮುಷ್ಕರ ಆರಂಭವಾಗುವ ಒಂದು ದಿನ ಮುಂಚಿತವಾಗಿಯೇ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಇನ್ನು ಮೇ 20ರ ಬೆಳಗ್ಗೆ 6 ಗಂಟೆಯಿಂದ ರಾಜ್ಯದ ಪ್ರಮುಖ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !