July 21, 2026
Tuesday, July 21, 2026
spot_img

ಭದ್ರಾ ಯೋಜನೆಗೆ ಕೇಂದ್ರದ ಗ್ರೀನ್ ಸಿಗ್ನಲ್: ಅರಣ್ಯ ಇಲಾಖೆ ಅನುಮತಿ ಸಿಕ್ಕಿದೆ ಎಂದ ಗೋವಿಂದ ಕಾರಜೋಳ

ಹೊಸದಿಗಂತ ವರದಿ ಚಿತ್ರದುರ್ಗ:

ಭದ್ರಾ ಮೇಲ್ದಂಡೆ ಯೋಜನೆಯ ಪ್ಯಾಕೇಜ್-1 ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿದೆ ಎಂದು ಸಂಸದ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 1ನೇ ಪ್ಯಾಕೇಜ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಕಣಗಲಕೊಪ್ಪ, ಚಿಕ್ಕಮಗಳೂರು ಜಿಲ್ಲೆಯ ಕಸಬಾ ಹೋಬಳಿಯ ಕೆ.ಕನಬೂರು ಹಾಗೂ ಮುತ್ತಿನಕೊಪ್ಪ ಗ್ರಾಮಗಳ ಸರ್ವೆ ನಂಬರುಗಳಲ್ಲಿ ಸುಮಾರು ೭.೫೩ ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ೨೨೦ ಕೆವಿ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ಕೋರಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಪ್ರಸ್ಥಾವನೆ ಸಲ್ಲಿಸಲಾಗಿತ್ತು ಎಂದಿದ್ದಾರೆ.

ಸದರಿ ಪ್ರಸ್ಥಾವನೆಗೆ ಮಾನ್ಯ ಸಂಸದರಾದ ಗೋವಿಂದ ಎಂ ಕಾರಜೋಳ್‌ರವರು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರಾದ ಭೂಪೇಂದ್ರ ಯಾದವ್‌ರವರಿಗೆ ಸತತ ಒತ್ತಡ ಹೇರಿದ್ದರ ಪರಿಣಾಮವಾಗಿ ದಿನಾಂಕ ೧೦.೦೭.೨೦೨೬ ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅಂತಿಮವಾಗಿ ೭.೫೩ ಎಕರೆ ಅರಣ್ಯ ಪ್ರದೇಶದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ತಾತ್ವಿಕ ಅನುಮೋದನೆ ನೀಡಿದೆ ಎಂದು ಸಂಸದರು ತಿಳಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯನ್ನು ಎರಡು ಪ್ಯಾಕೇಜ್‌ಗಳನ್ನಾಗಿ ವಿಂಗಡಣೆ ಮಾಡಲಾಗಿದ್ದು, ಮೊದಲ ಪ್ಯಾಕೇಜ್‌ನಲ್ಲಿ ತುಂಗಾ ಜಲಾಶಯದಿಂದ ೧೭.೫೪ ಟಿ.ಎಂ.ಸಿ. ನೀರೆತ್ತಿ ಭದ್ರಾ ಜಲಾಶಯಕ್ಕೆ ತುಂಬಿಸುವುದು, ಎರಡನೇ ಪ್ಯಾಕೇಜ್‌ನಲ್ಲಿ ಭದ್ರಾ ಜಲಾಶಯದಿಂದ ೨,೨೫,೫೧೫ ಹೆಕ್ಟೇರ್ ಪ್ರದೇಶಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸುವುದು ಎಂದು ಎರಡು ಪ್ಯಾಕೇಜ್‌ಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ:

ಪ್ರಾಥಮಿಕ ಬಳಕೆದಾರ ಸಂಸ್ಥೆಯಾದ ಕರ್ನಾಟಕ ನೀರಾವರಿ ನಿಗಮವು ಪಲ್ಲಟಗೊಳಿಸಲಾದ ಅರಣ್ಯ ಭೂಮಿಯಲ್ಲಿ ಕನಿಷ್ಟ ಸಂಖ್ಯೆಯ ಮರಗಳನ್ನು ಮಾತ್ರ ಕ್ತತರಿಸಬೇಕು, ಕೆಲಸದ ಅನುಷ್ಟಾನಕ್ಕಾಗಿ ಸಾಮಗ್ರಿಗಳನ್ನು ಸಾಗಿಸಲು ಅರಣ್ಯ ಪ್ರದೇಶದ ಒಳಗೆ ಯಾವುದೇ ಹೆಚ್ಚುವರಿ ಅಥವಾ ಹೊಸ ರಸ್ತೆ ಮಾರ್ಗಗಳನ್ನು ನಿರ್ಮಿಸಬಾರದು. ಅರಣ್ಯಭೂಮಿಯನ್ನು ಯೋಜನೆಯ ಪ್ರಸ್ತಾವನೆಯಲ್ಲಿ ನಿರ್ದಿಷ್ಟಪಡಿಸಿದ ಉದ್ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಬಾರದು.

ಯೋಜನೆಗೆ ಬಳಸಲಾದ ಒಟ್ಟು ಅರಣ್ಯ ಪ್ರದೇಶವು ೭.೫೩ ಹೆಕ್ಟೇರ್ ಪ್ರದೇಶವನ್ನು ಮೀರಬಾರದು. ಈ ನಿಬಂಧನೆ ಸೇರಿ ಹಲವು ಷರತ್ತುಗಳನ್ನು ಕೇಂದ್ರ ಸರ್ಕಾರ ವಿಧಿಸಿ ತಾತ್ವಿಕ ಅನುಮೋದನೆ ನೀಡಿದೆ. ಈ ತಾತ್ವಿಕ ಅನುಮೋದನೆಯು ಈ ಪತ್ರವನ್ನು ಹೊರಡಿಸಿದ ದಿನಾಂಕದಿಂದ ೫ ವರ್ಷಗಳ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ೫ ವರ್ಷಗಳ ಒಳಗೆ ಷರತ್ತುಗಳನ್ನು ಪಾಲಿಸಸಿದ್ದಲ್ಲಿ ಈ ತಾತ್ವಿಕ ಅನುಮೋದನೆಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಬಹುದು ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !