May 16, 2026
Saturday, May 16, 2026
spot_img

ಚಿನ್ನಾಭರಣಗಳನ್ನು ಇಟ್ಟಿದ್ದ ಲಾಕರ್‌ನ್ನೇ ಹೊತ್ತೊಯ್ದ ಖದೀಮರು: ಜನರಲ್ಲಿ ಮನೆಮಾಡಿದ ಆತಂಕ

ಹೊಸದಿಗಂತ ವರದಿ ಹಾವೇರಿ :

ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಬಂಗಾರದ ಬೆಲೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ಅಲ್ಲಲ್ಲಿ ಸರಗಳ್ಳತನ ಹೆಚ್ಚಿವೆ. ಆದರೆ ಇದೀಗ ಹಾನಗಲ್ಲ ತಾಲೂಕಿನಲ್ಲಿ ಚಿನ್ನಾಭರಣದ ಅಂಗಡಿಗೆ ಕನ್ನ ಕೊರೆದಿರುವ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಇಟ್ಟಿದ್ದ ಲಾಕರ್‌ನ್ನೇ ಹೊತ್ತೊಯ್ದಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ಈಡು ಮಾಡಿದೆ.

ಹಾನಗಲ್ಲ ತಾಲೂಕಿನ ಚಿಕ್ಕಾಂಶಿ ಹೊಸೂರಿನಲ್ಲಿರುವ ಶಾರದಾ ಜ್ಯುವೇಲರ್ಸ್ ಅಂಗಡಿಯಲ್ಲಿ ಭಾರೀ ಕಳ್ಳತನ ನಡೆದಿದ್ದು, ಕಳ್ಳರ ಕೈಚಳಕ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ಕಳ್ಳತನ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಬಂಗಾರದ ಅಂಗಡಿಗೆ ಅಳವಡಿಸಲಾಗಿದ್ದ ಎರಡು ಷಟರ್ಸ್ ಕಟ್ ಮಾಡಿ ಒಳನುಗ್ಗಿರುವ ಕಳ್ಳರು ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನಿಟ್ಟಿದ ಲಾಕರನ್ನೇ ಹೊತ್ತೊಯ್ದಿದ್ದಾರೆ. ಈ ಲಾಕರ್‌ನಲ್ಲಿ ಅಂದಾಜು 750ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 3-4 ಕೆಜಿ ತೂಕದ ಬೆಳ್ಳಿ ವಸ್ತುಗಳು ಇದ್ದವು ಎನ್ನಲಾಗಿದೆ.

ಇದನ್ನೂ ಓದಿ:

ಘಟನಾ ಸ್ಥಳಕ್ಕೆ ಆಗಮಿಸಿದ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ಶ್ವಾನದಳದ ತಂಡ ಕೂಡಾ ಶೋಧ ಕಾರ್ಯ ನಡೆಸಿದೆ. ಘಟನಾ ಸ್ಥಳಕ್ಕೆ ಎಸ್ಪಿ ಯಶೋಧಾ ವಂಟಗೋಡಿ, ಡಿಎಸ್ಪಿ, ಶಿಗ್ಗಾಂವ ಡಿವೈಎಸ್ಪಿ, ಹಾನಗಲ್ಲ ಸಿಪಿಐ ಮತ್ತು ಪಿಎಸ್‌ಐ ಸಂಪತ್‌ಕುಮಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಕಳ್ಳತನ ನಡೆದಿರುವ ಸ್ಥಳ ಹಾಗೂ ಸುತ್ತಮುತ್ತಲಿನ ಅಂಗಡಿಗಳಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದು, ಇನ್ನಷ್ಟೇ ಕಳ್ಳರ ಜಾಡು ಪತ್ತೆಯಾಗಬೇಕಿದೆ.

ಕಳೆದೆರೆಡು ದಿನಗಳ ಹಿಂದೆಯೆಷ್ಟೆ ಹಾನಗಲ್ಲ ತಾಲೂಕಿನ ಕಾಲ್ವೆಯಲ್ಲಾಪುರ, ಅರಳೇಶ್ವರ ಮತ್ತು ಬಾಳಂಬೀಡದಲ್ಲಿ ಮನೆ ಹಾಗೂ ಅಂಗಡಿ ಕಳ್ಳತನ ನಡೆದ ಕುರಿತು ವರದಿಯಾಗಿದ್ದವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !