May 16, 2026
Saturday, May 16, 2026
spot_img

ಪ್ರಧಾನಿ ಮೋದಿ ಮಿತವ್ಯಯ ಸೂತ್ರ: ಯಾವ ಯಾವ ರಾಜ್ಯದಲ್ಲಿ ಏನೇನಾಗಿದೆ ಸರ್ಕಾರಗಳಿಂದ ಕ್ರಮ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಲ್ಲಿ ಯುದ್ಧದ ಕಾರಣದಿಂದ ಜಾಗತಿಕವಾಗಿ ಇಂಧನ ಪೂರೈಕೆ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನೀಡಿರುವ ಮಿತವ್ಯಯ ಸೂತ್ರಕ್ಕೆ ದೇಶದ ಹೆಚ್ಚಿನ ರಾಜ್ಯಗಳು ಉತ್ತಮ ಸ್ಪಂದನೆ ನೀಡಿವೆ. ಮೊದಲ ಹಂತದಲ್ಲಿ ಕೇಂದ್ರ ಸರ್ಕಾರವೇ ಮಾದರಿಯಾಗಿದ್ದು, ಪ್ರಧಾನಿಯವರ ಬೆಂಗಾವಲು ವಾಹನಗಳ ಸಂಖ್ಯೆಯಲ್ಲಿ ಶೇ. 50 ರಷ್ಟು ಕಡಿತಗೊಳಿಸಲಾಗಿದ್ದರೆ, ನಿತ್ಯದ ಅಲ್ಪಾವಧಿ ಪಯೋಗಕ್ಕಾಗಿ ಎಲೆಕ್ಟ್ರಿಕ್ ವಾಹನಗಳನ್ನು ತಕ್ಷಣವೇ ಬಳಸುವುದನ್ನು ಕಡ್ಡಾಯಗೊಳಿಸಿದೆ. ಇದಲ್ಲದೆ ಉನ್ನತ ದರ್ಜೆಯ ಕೇಂದ್ರ ಸಚಿವ ಸಂಪುಟದ ಸಚಿವರ ಭದ್ರತಾ ಬೆಂಗಾವಲು ವಾಹನಗಳಲ್ಲಿ ಕೂಡಾ ಅರ್ಧಕ್ಕಿಂತ ಹೆಚ್ಚು ಕಡಿತಗೊಳಿಸಲಾಗಿದೆ.

ದಿಲ್ಲಿಯಲ್ಲಿ ಅತ್ಯಗತ್ಯವಲ್ಲದ ಇಲಾಖೆಗಳ ಸಿಬ್ಬಂದಿಗೆ ಪ್ರತಿ ವಾರ ಕಡ್ಡಾಯ ಎರಡು ದಿನಗಳ ವರ್ಕ್ ಫ್ರಮ್ ಹೋಮ್ ವೇಳಾಪಟ್ಟಿ ಜಾರಿಗೊಂಡಿದೆ. ಎಲ್ಲಾ ಕೇಂದ್ರ ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಸೋಮವಾರದಂದು ಸಾರ್ವಜನಿಕ ಮೆಟ್ರೊ ಮಾರ್ಗ ಬಳಸಬೇಕು ಅಥವಾ ಕಾರ್‌ಪೂಲ್ ಮಾಡಬೇಕು ಎಂದು ಅಲ್ಲಿನ ಸರ್ಕಾರ ಕಡ್ಡಾಯಗೊಳಿಸಿದೆ. ಇದಲ್ಲದೆ ಎಲ್ಲಾ ಸರ್ಕಾರಿ ಕಚೇರಿಗಳ ಹವಾನಿಯಂತ್ರಣ ಘಟಕಗಳಲ್ಲಿ ತಾಪಮಾನವನ್ನು ಕಡ್ಡಾಯವಾಗಿ 24ಸಿ ನಿಂದ 26ಸಿ ನಡುವೆ ಇರುವಂತೆ ನಿಯಂತ್ರಣ ಮಾಡುವುದು, ವೇದಿಕೆಗಳ ಎಲ್ಲಾ ಕಾರ್ಯಕ್ರಮ ಸ್ಥಗಿತಗೊಳಿಸಿ, ಮೂರು ತಿಂಗಳ ಅವಧಿಗೆ ಅವುಗಳನ್ನು ಡಿಜಿಟಲ್ ವೇದಿಕೆಗಳಿಗೆ ಸ್ಥಳಾಂತರಿಸುವುದು ಜಾರಿ ಮಾಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಇಂಧನ ಉಳಿಸುವ ಸಲುವಾಗಿ ತಮ್ಮ ಅಧಿಕೃತ ಭದ್ರತಾ ಬೆಂಗಾವಲು ಪಡೆಯನ್ನು ಸ್ವಯಂಪ್ರೇರಿತರಾಗಿ ಕಡಿತಗೊಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಐಪಿ ವಾಹನಗಳಲ್ಲಿ ಕಡಿತ ಮಾಡಲಾಗಿದ್ದು, ಖಾಸಗಿ ಕಚೇರಿಗಳು ಮತ್ತು ಅತ್ಯಗತ್ಯವಲ್ಲದ ಸಾರ್ವಜನಿಕ ಇಲಾಖೆಗಳಲ್ಲಿ ವರ್ಕ್ ಫ್ರಮ್ ಹೋಮ್, ವರ್ಚುವಲ್ ಆಡಳಿತ ಜಾರಿ ಮಾಡಲಾಗಿದೆ. ಗುಜರಾತ್‌ನಲ್ಲಿ ಸರ್ಕಾರದ ಅಧಿಕೃತ ಪ್ರವಾಸಗಳು ರದ್ದಾಗಿದ್ದು, ವಾಹನಗಳ ಕಡಿತ, ವರ್ಚುವಲ್ ಆಡಳಿತಕ್ಕೆ ಒತ್ತು ನೀಡಲಾಗಿದೆ.

ಇದನ್ನೂ ಓದಿ:

ಬಿಹಾರದಲ್ಲಿ ಇವಿ ವಾಹನಗಳ ಬಳಕೆ ಆರಂಭವಾಗಿದ್ದು, ಬೆಂಗಾವಲು ವಾಹನಗಳಲ್ಲಿ ಕಡಿತ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಆಡಳಿತಾತ್ಮಕ ಉದ್ದೇಶದ ವಿಮಾನ ಪ್ರಯಾಣ ನಿಷೇಧಿಸಲಾಗಿದೆ. ಬೆಂಗಾಲು ವಾಹನಗಳಲ್ಲಿ ಕಡಿತವಾಗಿದ್ದು, ಅಧಿಕಾರಿಗಳು ಮತ್ತು ಸಚಿವರಿಗೆ ಸಾರ್ವಜನಿಕ ಸಾರಿಗೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಮಧ್ಯಪ್ರದೇಶದಲ್ಲೂ ಬೆಂಗಾವಲು ವಾಹನಗಳ ಕಡಿತಗೊಳಿಸಲಾಗಿದ್ದು, ರಾಜಕೀಯ ರೋಡ್ ಶೋ ನಿಷೇಧ ಮಾಡಲಾಗಿದೆ.

ರಾಜಸ್ಥಾನದಲ್ಲೂ ಬೆಂಗಾವಲು ವಾಹನಗಳ ಕಡಿತಗೊಳಿಸಿ ಇಂಧನ ವೆಚ್ಚ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ.

ಸಿಕ್ಕಿಂನಲ್ಲಿ ಆಡಳಿತಾತ್ಮಕ ವಾಹನಗಳ ಖರೀದಿಗೆ ಬ್ರೇಕ್ ಹಾಕಲಾಗಿದೆ. ತ್ರಿಪುರದಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಸರ್ಕಾರಿ ನೌಕರರಿಗೆ ಸರದಿ ಆಧಾರದಲ್ಲಿ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ.

ಈ ನಡುವೆ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇದುವರೆಗೆ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲವಾದರೂ ಮುಂದಿನ ದಿನಗಳಲ್ಲಿ ನಿಯಮ, ನಿರ್ಧಾರಗಳು ಜಾರಿಗೆ ಬರುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !