ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಜು.20ರಂದು ನಡೆದ ಪ್ರತಿಭಟನೆಯಲ್ಲಿ 12ವರ್ಷದ ಅಪ್ರಾಪ್ತ ಬಾಲಕನನ್ನು ಕರೆ ತಂದಿರುವುದಕ್ಕಾಗಿ ಸಿಜೆಪಿ ಮುಖಂಡರಾದ ಅಭಿಜಿತ್ ದೀಪ್ಕೆ , ಸೌರವ್ ದಾಸ್ ಮತ್ತಿತರ ಸಂಘಟಕರ ವಿರುದ್ಧ ನ್ಯಾಯವಾದಿ ರಿಂಕಿ ಚಟರ್ಜಿ ಸಿಂಗ್ ಅವರು ಪೋಕ್ಸೊ ಕಾಯ್ದೆಯಡಿ ಝೀರೋ ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ. ಇದರೊಂದಿಗೆ ವಿದ್ಯಾರ್ಥಿಗಳ ಪ್ರತಿಭಟನೆಯ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪಿತೂರಿಯ ವಿರುದ್ಧ ದೇಶದ ನಾಗರಿಕರು ಕೂಡ ಇದೀಗ ಧ್ವನಿ ಎತ್ತಲಾರಂಭಿಸಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿ ನಡೆದ ಪ್ರತಿಭಟನೆ ಅನುಮತಿ ಇರುವ ಜಂತರ್‌ಮಂತರ್ ಬದಲಿಗೆ ಸಂಸತ್ತಿಗೆ ಮೆರವಣಿಗೆ ಸಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭ ಭಾರತ ವಿರೋಧಿ , ಪ್ರಧಾನಿ ಮೋದಿ ದೂಷಣೆಯ ಘೋಷಣೆಗಳು ಮೊಳಗಿದ್ದವಲ್ಲದೆ ಹಿಂಸಾಗುಂಪುಗಳನ್ನು ಚದುರಿಸಲು ಲಾಠಿ ಪ್ರಹಾರವೂ ನಡೆದಿತ್ತು. ಈ ಪ್ರತಿಭಟನೆಗೆ ಕಾನೂನು ಬಾಹಿರವಾಗಿ ಮಕ್ಕಳನ್ನು ಕೂಡ ಕರೆ ತರಲಾಗಿತ್ತು ಎಂದು ರಿಂಕಿ ಚಟರ್ಜಿ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವು ಮಕ್ಕಳು ತಮ್ಮ ಹಾಗೂ ತಮ್ಮ ಮೃತ ತಾಯಿಯ ವಿರುದ್ಧ ತೀರಾ ಅಸಭ್ಯ, ಅಶ್ಲೀಲ, ನಿಂದಾತ್ಮಕ ಘೋಷಣೆಗಳನ್ನು ಕೂಗಿರುವ ಬಗ್ಗೆ ವಿಷಾದಿಸಿದ ಪ್ರಧಾನಿ ನರೇಂದ್ರ ಮೋದಿಯವರು ಈ ಮಕ್ಕಳನ್ನು ಕ್ಷಮಿಸುವುದಾಗಿ ಹೇಳಿದ್ದರು. ಆದರೆ 12 ವರ್ಷದ ಬಾಲಕಿಯರು ಸೇರಿದಂತೆ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಲಾಠಿಪ್ರಹಾರ ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿಯವರು ಕ್ಷಮೆ ಕೇಳಬೇಕೆಂದು ಸಿಜೆಪಿ ಸಂಘಟಕರು ವಿಡಿಯೋ ಪೋಸ್ಟ್ ಮಾಡಿ ಬೇಡಿಕೆ ಮಂಡಿಸಿದ್ದರು. ಹಾಗಾದರೆ ಈ ಅಪ್ರಾಪ್ತ ಬಾಲಕಿಯರನ್ನು ಪ್ರತಿಭಟನೆಗೆ ಕರೆ ತಂದವರು ಯಾರು ಎಂದು ಪ್ರಶ್ನಿಸಿದ ರಿಂಕಿ ಚಟರ್ಜಿ ಅವರು, ಈ ಅಪ್ರಾಪ್ತ ಮಕ್ಕಳು ರಕ್ಷಣೆ ಮತ್ತು ಕಾಳಜಿ ಪಡೆಯಬೇಕಾದವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆತಂದ ಸಂಘಟಕರನ್ನು ಗುರುತಿಸಿ ಅವರ ವಿರುದ್ಧ ಪೋಸ್ಕೋ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಿಲಿಗುರಿ ಸೈಬರ್ ಪೊಲೀಸರಿಗೆ ರಿಂಕಿ ಅವರು ದೂರು ನೀಡಿ, ದೀಪ್ಕೆ , ದಾಸ್ ಮತ್ತಿತರ ಜಿರಲೆ ಪಕ್ಷದ ಸಂಘಟಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಕೋರಿದರು.
ಇದನ್ನೂ ಓದಿ:
ಹಾಗೆಯೇ ಸಿಜೆಪಿ ಪ್ರತಿಭಟನೆಗೆ ಹಣಕಾಸು ನೆರವು ನೀಡಿದವರು ಯಾರು ಎಂದೂ ಅವರು ಪ್ರಶ್ನಿಸಿದ್ದು, ಇದೊಂದು ಡೀಪ್ ಸ್ಟೇಟ್ ಷಡ್ಯಂತ್ರವಾಗಿದ್ದು, ಇದರಲ್ಲಿ ಶಾಮೀಲಾಗಿರುವ ದಲ್ಲಾಳಿಗಳು ಹಾಗೂ ರಾಷ್ಟ್ರಘಾತಕ ಶಕ್ತಿಗಳ ಬಗೆಗೂ ತನಿಖೆ ನಡೆಸಬೇಕೆಂದು ಕೋರಿದ್ದಾರೆ.



