May 16, 2026
Saturday, May 16, 2026
spot_img

ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ವಿರೋಧ: ಮೇ 20 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‌ಗಳು ಬಂದ್

ಹೊಸ ದಿಗಂತ ವರದಿ, ಮಂಗಳೂರು:

ಆನ್‌ಲೈನ್ ಮೂಲಕ ಔಷಧ ಮಾರಾಟ ವಿರೋಧಿಸಿ ಮೇ 20ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‌ಗಳನ್ನು ಬಂದ್ ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಔಷಧ ವ್ಯಾಪಾರಿಗಳ ಸಂಘ ತಿಳಿಸಿದೆ.

ಆಲ್ ಇಂಡಿಯಾ ಆರ್ಗನೈಸೇಶನ್ ಆ- ಕೆಮಿಸ್ಟ್ಸ್ ಆಂಡ್ ಡ್ರಗ್ಗಿಸ್ಟ್ ಹಾಗೂ ಕರ್ನಾಟಕ ಕೆಮಿಸ್ಟ್ಸ್ ಆಂಡ್ ಡ್ರಗ್ಸಿಸ್ಟ್ ಅಸೋಸಿಯೇಶನ್ ಕರೆಯಂತೆ ರಾಷ್ಟ್ರವ್ಯಾಪಿ ಈ ಬಂದ್ ನಡೆಯಲಿದ್ದು, ಸೌತ್ ಕೆನರಾ ಕೆಮಿಸ್ಟ್ಸ್ ಆಂಡ್ ಡ್ರಗ್ಸಿಸ್ಟ್ ಅಸೋಸಿಯೇಶನ್‌ನ ಎಲ್ಲ ಸದಸ್ಯರು ಬೆಂಬಲಿಸಲಿದ್ದಾರೆ. ಮೇ 20ರಂದು 24 ಗಂಟೆಗಳ ಕಾಲ ಮೆಡಿಕಲ್ ಬಂದ್ ಇರಲಿದೆ ಎಂದು ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಔಷಧಗಳು ದೈನಂದಿನ ಬಳಕೆಯ ವಸ್ತುಗಳಂತಲ್ಲ. ಔಷಧ ಮಾರಾಟ ನಿಯಮಗಳಿವೆ ಹಾಗೂ ಜವಾಬ್ದಾರಿಯುತ ವಿತರಣೆ ಅಗತ್ಯ. ಆದರೆ, ಅನಿಯಂತ್ರಿತವಾಗಿ ಆನ್‌ಲೈನ್ ಮೂಲಕ ಔಷಧ ಮಾರಾಟದಿಂದ ಶೆಡ್ಯೂಲ್ಡ್ ಡ್ರಗ್ಸ್‌ಗಳ ದುರುಪಯೋಗ, ಸ್ವಯಂ ಚಿಕಿತ್ಸೆ, ನಕಲಿ ಔಷಧ ಚೀಟಿಗಳ ಮೂಲಕ ಔಷಧ ಪಡೆದುಕೊಳ್ಳುವ ಅಪಾಯವಿದೆ. ಆನ್‌ಲೈನ್ ಮೂಲಕ ಪೂರೈಕೆಯಾಗುವ ಔಷಧ ಅಸುರಕ್ಷಿತ ದಾಸ್ತಾನು ಹಾಗೂ ಪೂರೈಕೆಯಾಗುವ ಸಾಧ್ಯತೆಯಿದೆ. ಆನ್‌ಲೈನ್ ಮೂಲಕ ಖರೀದಿಸಿದ ಔಷಧಗಳ ದುರುಪಯೋಗ ಉಂಟಾದಾಗ ಮೆಡಿಕಲ್ ಶಾಪ್‌ಗಳ ಬಗ್ಗೆ ಅನುಮಾನ ಮೂಡುತ್ತದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ಎಐಒಸಿಡಿ ವತಿಯಿಂದ ಹಲವಾರು ಬಾರಿ ಮನವಿ ನೀಡಿದ್ದರೂ, ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವೆಬ್‌ಸೈಟ್ ಪೋರ್ಟಲ್ ಮೂಲಕ ಆನ್‌ಲೈನ್ ಮಾದರಿಯಲ್ಲಿ ಔಷಧ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಬಂದ್ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಕೋವಿಡ್ ಸಂದರ್ಭದಲ್ಲಿ ತುರ್ತು ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಔಷಧ ಮಾರಾಟಕ್ಕೆ ನೀಡಿದ ತಾತ್ಕಾಲಿಕ ಅನುಮತಿಯನ್ನು ಪ್ರಸ್ತುತ ಮುಂದುವರೆಸಲಾಗಿದೆ. ಈ ಅನುಮತಿಯನ್ನೂ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಸಂಘದ ಕಾರ್ಯದರ್ಶಿ ಡಾ.ಎ.ಕೆ. ಜಮಾಲ್, ಉಪಾಧ್ಯಕ್ಷ ಅಮೃತ್ ಕಿರಣ್ ರೈ, ಜತೆ ಕಾರ್ಯದರ್ಶಿ ಶ್ರೀನಿವಾಸ ಭಟ್, ಕೋಶಾಽಕಾರಿ ಚಂದ್ರಶೇಖರ ಭಟ್, ಸಮಿತಿ ಸದಸ್ಯರಾದ ಸುರೇಶ್ ಆಳ್ವ, ಶರಣಂ ಶೆಟ್ಟಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !