ಹೊಸದಿಗಂತ ಡಿಜಿಟಲ್ ಡಿಸ್ಕ್:
ದಸರಾ, ದೀಪಾವಳಿ ಹಬ್ಬದ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಗ್ರಾಹಕರ ಜೇಬಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ!
ಹೌದು, ಏರ್ ಕಂಡಿಷನರ್, LED ಟಿವಿ, ವಾಷಿಂಗ್ ಮಷಿನ್, ಫ್ರಿಡ್ಜ್ ಸೇರಿದಂತೆ ಹಲವು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಬೆಲೆಗಳು ಅ.1ರಿಂದ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಮುಖ ಕಂಪನಿಗಳು ಉತ್ಪಾದನಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ಬೆಲೆ ಪರಿಷ್ಕರಣೆಗೆ ಮುಂದಾಗಿವೆ.
ಉದ್ಯಮ ಮೂಲಗಳ ಪ್ರಕಾರ, ಏಸಿಗಳ ಬೆಲೆ ಸುಮಾರು ಶೇ.5ರಿಂದ 8ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕೆಲವು ಕಂಪನಿಗಳು ವಾಷಿಂಗ್ ಮಷಿನ್, ರೆಫ್ರಿಜರೇಟರ್ ಮತ್ತು LED ಟಿವಿಗಳ ಬೆಲೆಯನ್ನು ಸುಮಾರು ಶೇ.3ರಿಂದ 4ರಷ್ಟು ಹೆಚ್ಚಿಸಲು ಮುಂದಾಗಿವೆ. ಆದರೆ ಎಲ್ಲ ಕಂಪನಿಗಳೂ ಒಂದೇ ಪ್ರಮಾಣದಲ್ಲಿ ಬೆಲೆ ಹೆಚ್ಚಿಸುವ ನಿರ್ಧಾರ ಕೈಗೊಂಡಿಲ್ಲ; ಕೆಲವು ಸಂಸ್ಥೆಗಳು ಪರಿಸ್ಥಿತಿಯನ್ನು ಇನ್ನೂ ಪರಿಶೀಲಿಸುತ್ತಿವೆ.
ಬೆಲೆ ಏರಿಕೆಗೆ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಪ್ರಮುಖ ಕಾರಣ ಎನ್ನಲಾಗಿದೆ. ತಾಮ್ರ, ಅಲ್ಯೂಮಿನಿಯಂ, ಉಕ್ಕು ಹಾಗೂ ಕಚ್ಚಾ ತೈಲ ಆಧಾರಿತ ಉತ್ಪನ್ನಗಳ ವೆಚ್ಚ ಏರಿಕೆಯಾಗಿರುವುದರ ಜೊತೆಗೆ ಸರಕು ಸಾಗಣೆ ವೆಚ್ಚ ಮತ್ತು ಕರೆನ್ಸಿ ಏರಿಳಿತವೂ ಕಂಪನಿಗಳ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿದೆ.
ಇದು 2026ರಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ನಡೆಯುತ್ತಿರುವ ಮೂರನೇ ಸುತ್ತಿನ ಬೆಲೆ ಏರಿಕೆ ಎಂದು ಉದ್ಯಮ ಮೂಲಗಳು ತಿಳಿಸಿವೆ. ಹಬ್ಬದ ಋತುವಿನಲ್ಲಿ ಸಾಮಾನ್ಯವಾಗಿ AC, ಟಿವಿ ಹಾಗೂ ಇತರ ಗೃಹೋಪಯೋಗಿ ವಸ್ತುಗಳ ಮಾರಾಟ ಹೆಚ್ಚಾಗುವುದರಿಂದ, ಈ ಸಮಯದಲ್ಲೇ ಬೆಲೆ ಏರಿಕೆಯಾಗುತ್ತಿರುವುದು ಗ್ರಾಹಕರ ಖರೀದಿ ವೆಚ್ಚದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ನಡುವೆ ಕೆಲವು ಡೀಲರ್ಗಳು ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಹಳೆಯ ದರದಲ್ಲಿ ಹೆಚ್ಚಿನ ಪ್ರಮಾಣದ ಸರಕುಗಳನ್ನು ಖರೀದಿಸಿರುವುದರಿಂದ, ಅಂತಹ ಹಳೆಯ ಸ್ಟಾಕ್ ಮುಗಿಯುವವರೆಗೆ ಕೆಲವು ಉತ್ಪನ್ನಗಳು ಹಳೆಯ ಬೆಲೆಯಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.
ಬ್ಲೂ ಸ್ಟಾರ್, ಗೋದ್ರೇಜ್ ಅಪ್ಲೈಯನ್ಸಸ್, ಹೈಯರ್, ಡೈಕಿನ್ ಮತ್ತು ಸೂಪರ್ ಪ್ಲಾಸ್ಟ್ರೋನಿಕ್ಸ್ ಸೇರಿದಂತೆ ಹಲವು ಕಂಪನಿಗಳು ವಿವಿಧ ಉತ್ಪನ್ನಗಳ ಬೆಲೆ ಪರಿಷ್ಕರಣೆಯನ್ನು ಈಗಾಗಲೇ ಘೋಷಿಸಿವೆ ಅಥವಾ ದೃಢಪಡಿಸಿವೆ. ಮತ್ತೊಂದೆಡೆ, ಕೆಲವು ಕಂಪನಿಗಳು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಹೀಗಾಗಿ ಹಬ್ಬದ ಸಂದರ್ಭದಲ್ಲಿ ಏಸಿ, ಟಿವಿ, ಫ್ರಿಡ್ಜ್ ಅಥವಾ ವಾಷಿಂಗ್ ಮಷಿನ್ ಖರೀದಿಸಲು ಯೋಜಿಸುತ್ತಿರುವವರು ಮಾರುಕಟ್ಟೆಯಲ್ಲಿನ ಹಳೆಯ ಸ್ಟಾಕ್ ಹಾಗೂ ಹೊಸ ದರಗಳ ಬಗ್ಗೆ ಮಾರಾಟಗಾರರಿಂದ ಮಾಹಿತಿ ಪಡೆದುಕೊಳ್ಳುವುದು ಉತ್ತಮ!



