May 17, 2026
Sunday, May 17, 2026
spot_img

ಬಂಟ್ವಾಳದಲ್ಲಿ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ: ಭವ್ಯ ರಾಷ್ಟ್ರಕ್ಕಾಗಿ ಒಗ್ಗಟ್ಟು ಹೆಚ್ಚಿಸಲು ಸಂಘಟನೆಗಳಿಗೆ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಂದು ಸಂಘಟನೆ, ಹಿಂದು ರಾಷ್ಟ್ರದ ಸ್ಥಾಪನೆ ಉದ್ದೇಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಗೀತಾಂಜಲಿ ಕಲ್ಯಾಣ ಪಂಟಪದಲ್ಲಿ
ಹಿಂದೂ ಜನಜಾಗೃತಿ ಸಮಿತಿ ಸಾರಥ್ಯದಲ್ಲಿ ಜಿಲ್ಲಾ ಹಿಂದೂ ರಾಷ್ಟ್ರ ಅಧಿವೇಶನ ಭಾನುವಾರ ನಡೆಯಿತು.

ಈ ಸಂದರ್ಭ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಸಮನ್ವಯಕ ಚಂದ್ರ ಮೊಗವೀರ, 2012ರಲ್ಲಿ ಆರಂಭವಾದ ಹಿಂದೂ ರಾಷ್ಟ್ರ ಅಧಿವೇಶನದ ಕಾರ್ಯಗಳು ಇಂದು ಹೆಮ್ಮರವಾಗಿ ಬೆಳೆಯುತ್ತಿವೆ. ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ, 2025ರ ಕುಂಭಮೇಳದಲ್ಲಿ ಸಂತ ಮಹಾತ್ಮರು ಸೇರಿ ಹಿಂದೂ ರಾಷ್ಟ್ರದ ಕರಡು ಸಂವಿಧಾನವನ್ನು ಸಿದ್ಧಪಡಿಸಿದ್ದಾರೆ. ಇಂದು ದೇಶದ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಧರ್ಮ ಕಾರ್ಯದ ಹಾದಿಯಲ್ಲಿ ಬರುವ ಅಡೆತಡೆಗಳನ್ನು ಎದುರಿಸಲು ನಾವೆಲ್ಲರೂ ಸಾಧನೆ ನಡೆಸಿ ಕೈಜೋಡಿಸಬೇಕು ಎಂದು ಅವರು ಈ ಸಂದರ್ಭ ಕರೆ ನೀಡಿದರು.

ಲವ್ ಜಿಹಾದ್ ಮೂಲಕ ಹಿಂದೂ ಧರ್ಮದ ನಾಶಕ್ಕೆ ಸಂಚು

ಬಂಟ್ವಾಳದ ನ್ಯಾಯವಾದಿ ಶ್ರೀ ಪ್ರಸಾದ್ ರೈ ಮಾತನಾಡಿ, ಲವ್ ಜಿಹಾದ್ ಎಂಬ ವಿಷ ಸರ್ವತ್ರ ಹರಡುತ್ತಿದ್ದು, ಭಾರತ ಮತ್ತು ಹಿಂದು ಧರ್ಮವನ್ನು ನಾಶ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ. ಧರ್ಮದ ಆಧಾರ ಸ್ತಂಭವಾಗಿರುವ ಹಿಂದು ಹೆಣ್ಣು ಮಕ್ಕಳನ್ನು ಪ್ರೀತಿ-ಪ್ರೇಮದ ನಾಟಕ ಹಾಗೂ ವೇಷಾಂತರಗಳ ಮಾಯಾ ಜಾಲಕ್ಕೆ ಸಿಲುಕಿಸಿ ಈ ಷಡ್ಯಂತ್ರ ನಡೆಸಲಾಗುತ್ತಿದೆ. ನಮಗೆ ನಮ್ಮ ಆದರ್ಶ ಹಿಂದು ಸ್ತ್ರೀಯರ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲ. ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ವೀರ ವನಿತೆಯರು ಯಾವುದಕ್ಕೂ ಅಂಜದೆ ಅಧರ್ಮದ ವಿರುದ್ಧ ಹೋರಾಡಿ ಇತಿಹಾಸ ನಿರ್ಮಿಸಿದ್ದಾರೆ. ಅವರ ಹಾದಿಯಲ್ಲಿ ನಡೆದು, ಯಾವುದೇ ಜಿಹಾದ್‌ಗಳಿಗೆ ಬಲಿಯಾಗದೆ ನಮ್ಮ ಸ್ವಯಂ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸ್ವಾರ್ಥ ಬಿಟ್ಟು ಸತ್ಕುಟುಂಬ ಬೆಳೆಸಿದರೆ ಉತ್ತಮ ರಾಷ್ಟ್ರ ನಿರ್ಮಾಣ

ಗುರುಪುರ ವಜ್ರದೇಹಿಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದುಗಳು ಸ್ವಾರ್ಥ ಚಿಂತನೆಗಳನ್ನು ಬಿಟ್ಟು ನಿಸ್ವಾರ್ಥವಾಗಿ ಬದುಕಬೇಕಿದೆ. ದೇಶ ಮತ್ತು ಧರ್ಮದ ರಕ್ಷಣೆಗಾಗಿ ಕುಟುಂಬದ ರಕ್ಷಣೆ ಮುಖ್ಯವಾಗಿದ್ದು, ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಸತ್ ಕುಟುಂಬದಿಂದಲೇ ಉತ್ತಮ ರಾಷ್ಟ್ರದ ಸ್ಥಾಪನೆ ಸಾಧ್ಯ ಎಂದು ಪ್ರತಿಪಾದಿಸಿದರು.

ಇತಿಹಾಸ ತಿರುಚಿದರೂ ಸನಾತನ ಧರ್ಮದ ಸತ್ಯಕ್ಕೆ ನಾಶವಿಲ್ಲ

ಉಡುಪಿಯ ಉದ್ಯಮಿ ಶ್ರೀ ಅಜಯ್ ಶೆಟ್ಟಿ ಮಾತನಾಡಿ, ನಮ್ಮ ಸನಾತನ ಧರ್ಮಕ್ಕೆ ಎಲ್ಲ ಸಾಕ್ಷ್ಯಧಾರಗಳಿದ್ದರೂ ರಾಜಕಾರಣಿಗಳು ನಮ್ಮ ಆದರ್ಶ ಇತಿಹಾಸವನ್ನು ತಿರುಚಿದ್ದಾರೆ. ವಿದೇಶದಿಂದ ಭಾರತಕ್ಕೆ ಜ್ಞಾನ ಹುಡುಕಿಕೊಂಡು ಬರುವುದೇ ನಮ್ಮ ಧರ್ಮದ ಶ್ರೇಷ್ಠತೆಗೆ ಸಾಕ್ಷಿ. ಇತಿಹಾಸದ ಪುಸ್ತಕಗಳಲ್ಲಿ ಈ ಸತ್ಯಗಳು ಮಾಯವಾಗಿದ್ದರೂ ಸತ್ಯಕ್ಕೆ ಎಂದಿಗೂ ನಾಶವಿಲ್ಲ. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕಾರ್ಯದಿಂದ ಸಾತ್ವಿಕ ಹಿಂದೂ ರಾಷ್ಟ್ರ ಖಂಡಿತ ಬರಲಿದ್ದು, ನಾವೆಲ್ಲರೂ ಭಗವಂತನ ಭಕ್ತರಾಗಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮವನ್ನು ಶಂಖನಾದ, ದೀಪಪ್ರಜ್ವಲನೆ, ವೇದ ಮಂತ್ರಗಳ ಮೂಲಕ ಪ್ರಾರಂಭಿಸಲಾಯಿತು. ಸುಧಾ ತಲಪಾಡಿ, ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಸನಾತನ ಸಂಸ್ಥೆಯ ಸಂತ ಸಾಂತಪ್ಪ ಗೌಡ, ಮಂಗಳೂರಿನ ವಕೀಲ ಜಗದೀಶ ಶೇಣವ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ರಾಧಾಕೃಷ್ಣ ಅಡ್ಯಾಂತಾಯ, ಅಳಿಕೆ ಉಳಿಯ ವೈಷ್ಣವಿ ಕ್ಷೇತ್ರದ ಶಿವಾನಂದ ಸರಸ್ವತಿ ಸ್ವಾಮೀಜಿ, ರಾಜ ರಾಮ್ ಭಟ್ ಸಹಿತ ಮಂಗಳೂರು, ಬಂಟ್ವಾಳ , ಪುತ್ತೂರು, ಬೆಳ್ತಂಗಡಿ ಹಾಗೂ ಕೊಡಗು ಕ್ಷೇತ್ರಗಳಿಂದ ಹಿಂದೂ ಸಂಘಟನೆಯ ಮುಖಂಡರು, ದೇವಸ್ಥಾನಗಳ ವಿಶ್ವಸ್ತರು, ಪುರೋಹಿತರು, ಆಡಳಿತ ಮಂಡಳಿಯವರು, ಸಕ್ರೀಯ ಹಿಂದು ಕಾರ್ಯಕರ್ತರು, ವಿವಿಧ ಆಧ್ಯಾತ್ಮಿಕ, ಧಾರ್ಮಿಕ ಪ್ರಮುಖರು, ವಕೀಲರು ಉದ್ಯಮಿಗಳು ಸಂಘಟನೆಯ ಅಧ್ಯಕ್ಷರು, ಹಿಂದೂತ್ವವಾದಿ ವಕೀಲರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !