May 17, 2026
Sunday, May 17, 2026
spot_img

ಪ್ರತಿದಿನ BMTC ಬಸ್ ಹತ್ತಿ, ಶಕ್ತಿ ಯೋಜನೆ ಲಾಭ ಪಡೆಯಿರಿ: ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಟಾಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿ ನಾಯಕರ ಇತ್ತೀಚಿನ ಮೆಟ್ರೋ ಹಾಗೂ ಬೈಕ್ ಪ್ರಯಾಣ ಕೇವಲ ಒಂದು ದಿನದ ರಾಜಕೀಯ ಗಿಮಿಕ್ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಟುವಾಗಿ ಟೀಕಿಸಿದ್ದಾರೆ.

ವಿರೋಧ ಪಕ್ಷದ ನಾಯಕರ ಸಾರ್ವಜನಿಕ ಸಾರಿಗೆ ಬಳಕೆಯ ಕುರಿತು ಮಾತನಾಡಿದ ಅವರು, “ಬಿಜೆಪಿಯವರು ಪ್ರತಿದಿನ ಮೆಟ್ರೋದಲ್ಲಿ ಓಡಾಡಿದರೆ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಒಬ್ಬರು ಬೈಕ್, ಮತ್ತೊಬ್ಬರು ಮೆಟ್ರೋ ಹತ್ತುವುದು ಕೇವಲ ಪ್ರದರ್ಶನಕ್ಕಷ್ಟೇ. ಧೈರ್ಯವಿದ್ದರೆ ದಿನವೂ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಲಿ ಹಾಗೂ ಕಾಂಗ್ರೆಸ್ ಸರ್ಕಾರದ ‘ಶಕ್ತಿ’ ಯೋಜನೆಯ ಲಾಭ ಪಡೆದುಕೊಳ್ಳಲಿ” ಎಂದು ಸವಾಲು ಹಾಕಿದರು. ಇದೇ ವೇಳೆ, “ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೆಟ್ರೋ ಹತ್ತುವ ಪರಿಸ್ಥಿತಿ ತಂದಿಟ್ಟವರು ಯಾರು ಎಂಬುದಕ್ಕೆ ಉತ್ತರಿಸಲಿ” ಎಂದು ಅವರು ಪ್ರಶ್ನಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಚಿವರು, “ಇದು ಬಿಜೆಪಿಯನ್ನು ಗೆಲ್ಲಿಸಲು ರೂಪಿಸಲಾಗಿರುವ ಅಸಂವಿಧಾನಾತ್ಮಕ ವಿನ್ಯಾಸವಾಗಿದೆ. ಹೆಸರಿನಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ವೈಸ್ ಅಡ್ಮಿರಲ್ ಅವರ ಹೆಸರೇ ಡಿಲೀಟ್ ಆಗಿರುವುದು ಇದಕ್ಕೆ ಸಾಕ್ಷಿ. ಈ ವ್ಯವಸ್ಥೆಯು ಜನರನ್ನು ಪ್ರಜಾಪ್ರಭುತ್ವದ ಹಕ್ಕಿನಿಂದ ದೂರ ಇಡುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ, “ಚುನಾವಣೆ ವೇಳೆ ಕಾಂಗ್ರೆಸ್ ಬಂದರೆ ಮಂಗಳಸೂತ್ರ ಕಸಿಯುತ್ತಾರೆ ಎಂದು ಪ್ರಧಾನಿ ಮೋದಿ ಭಾಷಣ ಮಾಡಿದ್ದರು. ಆದರೆ ಇಂದು ಕೇಂದ್ರ ಸರ್ಕಾರವೇ ಜನರಿಗೆ ಚಿನ್ನ ಖರೀದಿ ಮಾಡಬೇಡಿ ಎಂದು ಹೇಳುತ್ತಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎನ್ನುವುದಾದರೆ ಕೇಂದ್ರ ಸರ್ಕಾರ ಮೊದಲು ಶ್ವೇತಪತ್ರ ಬಿಡುಗಡೆ ಮಾಡಲಿ” ಎಂದು ಸವಾಲು ಹಾಕಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !