ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ನಟ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಅಲ್ಲಿನ ರಾಜಕೀಯ ವಲಯದಲ್ಲಿ ತೀವ್ರ ವಾಕ್ಸಮರ ಆರಂಭವಾಗಿದೆ. “ಮುಖ್ಯಮಂತ್ರಿ ವಿಜಯ್ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಕನಿಷ್ಠ 6 ತಿಂಗಳು ಕೂಡ ಆಡಳಿತ ನಡೆಸಲು ಸಾಧ್ಯವಿಲ್ಲ” ಎಂದು ಡಿಎಂಕೆ ಹಿರಿಯ ನಾಯಕ ಹಾಗೂ ತಿರುಚೆಂದೂರು ಶಾಸಕ ಅನಿತ ರಾಧಾಕೃಷ್ಣನ್ ಭವಿಷ್ಯ ನುಡಿದಿದ್ದಾರೆ.
ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪಕ್ಷದ ಪ್ರಮುಖ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟಿವಿಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಅವರು ಶೀಘ್ರದಲ್ಲೇ ಮತ್ತೆ ಅಧಿಕಾರಕ್ಕೆ ಮರಳಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಿವಿಕೆ ನಾಯಕ ಆಧವ್ ಅರ್ಜುನಗೆ ಬಹಿರಂಗ ಸವಾಲು!
ಇದೇ ವೇಳೆ ಟಿವಿಕೆ ಪಕ್ಷದ ಹಿರಿಯ ನಾಯಕ ಹಾಗೂ ವಿಲ್ಲಿವಕ್ಕಂ ಕ್ಷೇತ್ರದ ಶಾಸಕ ಆಧವ್ ಅರ್ಜುನ ಅವರಿಗೆ ಅನಿತ ರಾಧಾಕೃಷ್ಣನ್ ಬಹಿರಂಗ ಚುನಾವಣಾ ಸವಾಲು ಹಾಕಿದ್ದಾರೆ.
“ಈ ಸರ್ಕಾರ ಇನ್ನು ಕೇವಲ ನಾಲ್ಕು ತಿಂಗಳು ಮಾತ್ರ ಇರಲಿದೆ. ಆಧವ್ ಅರ್ಜುನ ಎಂಬ ವ್ಯಕ್ತಿಗೆ ಧೈರ್ಯವಿದ್ದರೆ, ತಕ್ಷಣ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ನಾನು ಕೂಡ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಇಬ್ಬರೂ ಬಂದು ತಿರುಚೆಂದೂರು ಕ್ಷೇತ್ರದಲ್ಲಿ ಮುಖಾಮುಖಿ ಸ್ಪರ್ಧಿಸೋಣ. ಇದು ನಮ್ಮ ಸ್ವಂತ ಊರು, ಇಲ್ಲಿ ನಮ್ಮ ವಿರುದ್ಧ ಯಾರು ಸ್ಪರ್ಧಿಸಿದರೂ ಧೂಳೀಪಟವಾಗುವುದು ಖಚಿತ” ಎಂದು ರಾಧಾಕೃಷ್ಣನ್ ಸವಾಲು ಎಸೆದಿದ್ದಾರೆ.
ತಮಿಳುನಾಡಿನಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯ್ ಸರ್ಕಾರದ ವಿರುದ್ಧ ಡಿಎಂಕೆ ನಾಯಕರು ಈಗಿನಿಂದಲೇ ರಾಜಕೀಯ ರಣತಂತ್ರಗಳನ್ನು ಹೆಣೆಯುತ್ತಿರುವುದಕ್ಕೆ ಈ ಹೇಳಿಕೆ ಸ್ಪಷ್ಟ ಸಾಕ್ಷಿಯಾಗಿದೆ. ಇದು ಮುಂಬರುವ ದಿನಗಳಲ್ಲಿ ಉಭಯ ಪಕ್ಷಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ರೋಚಕಗೊಳಿಸಲಿದೆ.



