ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ನೂತನ ಸರ್ಕಾರವು ಭದ್ರವಾಗಿಲ್ಲ, ಅದು ಯಾವಾಗ ಬೇಕಾದರೂ ಪತನಗೊಳ್ಳಬಹುದು ಎಂದು ಡಿಎಂಕೆ (DMK) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಎದುರಾಗುವ ಸಾಧ್ಯತೆಗಳಿದ್ದು, ಅದಕ್ಕಾಗಿ ಇಂದಿನಿಂದಲೇ ಸಿದ್ಧರಾಗಿರುವಂತೆ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಉರುಳುತ್ತಾ ನಟ ವಿಜಯ್ ಸರ್ಕಾರ?
ವಿಧಾನಸಭೆಯಲ್ಲಿ ಸದ್ಯ ನಟ ವಿಜಯ್ ಟಿವಿಕೆ (TVK) ಪಕ್ಷವು ಸ್ವತಂತ್ರವಾಗಿ 107 ಸ್ಥಾನಗಳನ್ನು ಹೊಂದಿದ್ದು, ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಧಿಸಿದೆ. ಇದರೊಂದಿಗೆ ಕಳೆದ ವಾರ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರದ ಪರ ಮತ ಹಾಕಿದ್ದ ಎಐಎಡಿಎಂಕೆಯ 25 ಬಂಡಾಯ ಶಾಸಕರ ಬೆಂಬಲವೂ ಮುಖ್ಯಮಂತ್ರಿಗೆ ಲಭ್ಯವಿದೆ. ಆದರೆ, ಹೊರಗಿನಿಂದ ಬೆಂಬಲ ನೀಡುತ್ತಿರುವ ವಿಸಿಕೆ, ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಯಾವುದೇ ಕ್ಷಣದಲ್ಲಾದರೂ ಬೆಂಬಲ ವಾಪಸ್ ಪಡೆಯಬಹುದು ಅಥವಾ ಬಂಡಾಯ ಶಾಸಕರು ಕೋರ್ಟ್‌ನಿಂದ ಅನರ್ಹಗೊಳ್ಳಬಹುದು ಎಂಬುದು ಡಿಎಂಕೆ ಲೆಕ್ಕಾಚಾರವಾಗಿದೆ.
2029ರಲ್ಲಿ ಮತ್ತೊಮ್ಮೆ ಅಸೆಂಬ್ಲಿ ಎಲೆಕ್ಷನ್?
ಪಕ್ಷದ ಜಿಲ್ಲಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸ್ಟಾಲಿನ್, ಈ ಸೋಲು ನಮಗೆ ತಾತ್ಕಾಲಿಕ. ಪ್ರಸ್ತುತ ಇರುವ ಆಡಳಿತ ಹೆಚ್ಚು ದಿನ ಉಳಿಯುವುದಿಲ್ಲ. ಬಹುಶಃ 2029ರ ಲೋಕಸಭಾ ಚುನಾವಣೆಯ ಜೊತೆಯಲ್ಲೇ ತಮಿಳುನಾಡು ವಿಧಾನಸಭೆಗೂ ಮತ್ತೊಮ್ಮೆ ಚುನಾವಣೆ ಎದುರಾಗಬಹುದು. ನಾವೆಲ್ಲರೂ ಒಟ್ಟಾಗಿ ಶ್ರಮಿಸಿ ಭರ್ಜರಿ ಪುನರಾಗಮನ ಮಾಡಬೇಕಿದೆ ಎಂದು ಕಾರ್ಯಕರ್ತರಲ್ಲಿ ಧೈರ್ಯ ತುಂಬಿದ್ದಾರೆ.
ಸೋಲಿನ ಹೊಣೆ ಹೊತ್ತ ಸ್ಟಾಲಿನ್
ತಮ್ಮ ಸಾಂಪ್ರದಾಯಿಕ ಕೊಳತ್ತೂರು ಕ್ಷೇತ್ರದಲ್ಲೂ ವೈಯಕ್ತಿಕವಾಗಿ ಪರಾಭವಗೊಂಡಿರುವ ಎಂ.ಕೆ. ಸ್ಟಾಲಿನ್, ಚುನಾವಣಾ ವೈಫಲ್ಯದ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಸೂರ್ಯ ಎಂದಿಗೂ ಮುಳುಗುವುದಿಲ್ಲ. ನಾವು ಚಹಾ ಅಂಗಡಿಗಳಲ್ಲಿ ಮಾಡುತ್ತಿದ್ದ ರಾಜಕೀಯವನ್ನು ಇನ್ನುಮುಂದೆ ಸೋಶಿಯಲ್ ಮೀಡಿಯಾದಲ್ಲಿ ಮಾಡಬೇಕಿದೆ ಎಂದು ಹೇಳುವ ಮೂಲಕ ವಿಜಯ್ ಟಿವಿಕೆ ಪಕ್ಷದ ಡಿಜಿಟಲ್ ತಂತ್ರಕ್ಕೆ ಕೌಂಟರ್ ಕೊಡಲು ಕರೆ ನೀಡಿದ್ದಾರೆ.



