May 19, 2026
Tuesday, May 19, 2026
spot_img

ಗಡಿನಾಡು-ಹೊರನಾಡು ಕನ್ನಡಿಗರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

ಹೊಸದಿಗಂತ ವರದಿ ಬೀದರ್:

ಗಡಿನಾಡು ಹಾಗೂ ಹೊರನಾಡು ಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಗಡಿನಾಡು ಕನ್ನಡ ವಿದ್ಯಾರ್ಥಿಗಳ “ಕನ್ನಡ ಮಾಧ್ಯಮ ಪ್ರಶಸ್ತಿ” ಹಾಗೂ ಶಿಷ್ಯವೇತನ ಯೋಜನೆಯನ್ನು ತಕ್ಷಣ ಮರುಜಾರಿಗೆ ತರಬೇಕು ಎಂದು ಹೊರನಾಡು ಕನ್ನಡಿಗರ ಹೋರಾಟ ಸಮಿತಿ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.

ಸರ್ಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶಿಷ್ಯವೇತನ ಯೋಜನೆ ಮರುಜಾರಿಗೆ ಒತ್ತಾಯ

2011-12ರಲ್ಲಿ ಆರಂಭವಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ “ಗಡಿನಾಡು ಕನ್ನಡ ವಿದ್ಯಾರ್ಥಿಗಳ ಕನ್ನಡ ಮಾಧ್ಯಮ ಪ್ರಶಸ್ತಿ ಹಾಗೂ ಶಿಷ್ಯವೇತನ” ಯೋಜನೆಯನ್ನು 2022-23ರಿಂದ ಸ್ಥಗಿತಗೊಳಿಸಿರುವುದನ್ನು ಖಂಡಿಸಿದ ಅವರು, ಈ ಯೋಜನೆ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ನೆರವಾಗುತ್ತಿತ್ತು ಎಂದು ತಿಳಿಸಿದ್ದಾರೆ. ಗಡಿಭಾಗಗಳಲ್ಲಿ ಕನ್ನಡ ಮಾಧ್ಯಮದ ಮೇಲಿನ ಆಸಕ್ತಿ ಹೆಚ್ಚಿಸಲು ಈ ಯೋಜನೆ ಪರಿಣಾಮಕಾರಿಯಾಗಿತ್ತು ಎಂದು ಹೇಳಿದ್ದಾರೆ.

ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಹಾಗೂ ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದು, ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕರ್ನಾಟಕ ಸರ್ಕಾರದಿಂದ ಸಮರ್ಪಕ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಶಾಲೆಗಳ ಸ್ಥಿತಿ ಬಗ್ಗೆ ಆತಂಕ

ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ ತಾಲೂಕಿನ ಕಾರಾಮುಂಗಿ, ಶಿಖರಖಾನ, ಗಡಿಗಾಂವ, ಔಧತಪುರ, ಎಸಗಿ, ಶಾಹಾಪುರ, ಮೋರಗಿ, ಗೊಂದೆಗಾವ, ರತ್ನಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಸುಮಾರು 485 ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿ ವಿದ್ಯಾರ್ಥಿಗಳಿಗೆ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಹೊರನಾಡಿನ ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕದ ಉನ್ನತ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಒಳನಾಡಿನ ಅಭ್ಯರ್ಥಿಗಳ ಮಾದರಿಯಲ್ಲಿ ಮೀಸಲು ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ:

ಇದೇ ವೇಳೆ, ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ-2017, ಪ್ರೊ. ಬರಗೂರು ರಾಮಚಂದ್ರಪ್ಪ ಗಡಿನಾಡು ಅಧ್ಯಯನ ವರದಿ, ವಾಟಾಳ ನಾಗರಾಜ ಅವರ ಗಡಿಕನ್ನಡಿಗರ ಸಮಸ್ಯೆಗಳ ಅಧ್ಯಯನ ವರದಿ, ರಾಜ್ಯ ಸಾಂಸ್ಕೃತಿಕ ನೀತಿ ವರದಿ ಸೇರಿದಂತೆ ಹಲವು ಸಮಿತಿ ವರದಿಗಳನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.

ಕನ್ನಡ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿ

ಆರು ರಾಜ್ಯಗಳಲ್ಲಿ ಕರ್ನಾಟಕ ಸರ್ಕಾರದಿಂದ ಕನ್ನಡ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಬೇಕು ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊರರಾಜ್ಯಗಳಿಂದ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಹಾರಾಷ್ಟ್ರದ ಅಕ್ಕಲಕೋಟ, ದಕ್ಷಿಣ ಸೊಲ್ಲಾಪುರ, ಜತ್ತ ಹಾಗೂ ಗಡಹಿಂಗ್ಲಜ್ ಭಾಗಗಳಲ್ಲಿ ಇಂದಿಗೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ವಾಸಿಸುತ್ತಿದ್ದರೂ, ಭಾಷಾ ಮತ್ತು ಸಾಂಸ್ಕೃತಿಕ ಭದ್ರತೆ ಕೊರತೆಯಿಂದ ಆತಂಕ ಎದುರಿಸುತ್ತಿದ್ದಾರೆ ಎಂದು ಧರ್ಮೇಂದ್ರ ಪೂಜಾರಿ ಬಗ್ದೂರಿ ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಈ ಹಿಂದೆ ಇದ್ದ 140 ಕನ್ನಡ ಶಾಲೆಗಳ ಪೈಕಿ ಅನೇಕ ಶಾಲೆಗಳು ಮುಚ್ಚಲ್ಪಟ್ಟಿದ್ದು, 135 ಕನ್ನಡ ಶಿಕ್ಷಕರನ್ನು ಇಂಗ್ಲಿಷ್ ಶಿಕ್ಷಕರನ್ನಾಗಿ ಪರಿವರ್ತಿಸಲಾಗಿದೆ ಎಂದು ಅವರು ಆರೋಪಿಸಿದರು. ಹೈದರಾಬಾದ್‌ನಲ್ಲಿ ಸುಮಾರು 12 ಲಕ್ಷ ಕನ್ನಡಿಗರು ಹಾಗೂ 6 ಲಕ್ಷ ಮತದಾರರಿದ್ದರೂ ಕರ್ನಾಟಕ ಸರ್ಕಾರದಿಂದ ಸಮರ್ಪಕ ನೆರವು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ವಿರುದ್ಧ ಹೋರಾಟದ ಎಚ್ಚರಿಕೆ

ಗಡಿನಾಡು ವಿದ್ಯಾರ್ಥಿಗಳ ಪ್ರಶಸ್ತಿ ಹಾಗೂ ಶಿಷ್ಯವೇತನ ಯೋಜನೆಯನ್ನು ಸರ್ಕಾರ ಮರುಜಾರಿಗೆ ತರದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಧರ್ಮೇಂದ್ರ ಪೂಜಾರಿ ಬಗ್ದೂರಿ ಎಚ್ಚರಿಕೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !