August 29, 2026
Saturday, August 29, 2026
spot_img

ಖಾನಾಪುರದಲ್ಲಿ ಅಬಕಾರಿ ಅಧಿಕಾರಿಗಳ ದಾಳಿ: 35.01 ಲಕ್ಷ ರೂ. ಮೌಲ್ಯದ ಸ್ಪಿರಿಟ್, ಟ್ಯಾಂಕರ್ ವಶ

ಹೊಸದಿಗಂತ ವರದಿ, ಬೆಳಗಾವಿ:

ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಮದ್ಯಸಾರ (ಸ್ಪಿರಿಟ್) ಸಾಗಾಣಿಕೆ ಮಾಡುತ್ತಿದ್ದ ಟ್ಯಾಂಕರ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಸೋಮವಾರ ಮುಂಜಾನೆ ಸುಮಾರು 3.45 ಗಂಟೆಗೆ ಚಾಕಲೇಟ್ ಬಣ್ಣದ ಅಶೋಕ ಲೇಲ್ಯಾಂಡ್ ಕಂಪನಿಯ ಕೆಎ-22 ಬಿ-3793 ನೋಂದಣಿ ಸಂಖ್ಯೆಯ ಆರು ಚಕ್ರದ ಟ್ಯಾಂಕರ್ ವಾಹನದಲ್ಲಿ ಸುಮಾರು 14,000 ಲೀಟರ್ ಸ್ಪಿರಿಟ್ ಅನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ಪತ್ತೆಯಾಗಿದೆ.

ತನಿಖೆಗೆ ಹಾಜರಾಗಲು ನೊಟೀಸ್ ಜಾರಿ

ಪ್ರಕರಣದಲ್ಲಿ ಆರೋಪಿತನಾದ ಸಿದ್ದರಾಜು ಮುಟ್ಟಸ್ವಾಮಿ ಶೆಟ್ಟಿ (47), ನಿವಾಸಿ ಹೆಗ್ಗಿನವಾಳು, ತಾಲೂಕು ನಂಜನಗೂಡು, ಜಿಲ್ಲೆ ಮೈಸೂರು ಎಂಬಾತನಿಗೆ ಬಿಎನ್ಎಸ್ಎಸ್ ಕಾಯ್ದೆ 2023ರ ಕಲಂ 35(3)ರ ಅನ್ವಯ ಮುಂದಿನ ತನಿಖೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನದ ಮಾಲೀಕನ ಪತ್ತೆ ಹಾಗೂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬೆಳಗಾವಿ ಅಬಕಾರಿ ಅಪರ ಆಯುಕ್ತರು ಡಾ. ವೈ. ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಎಫ್.ಎಚ್. ಚಲವಾದಿ, ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ., ಹಾಗೂ ಅಬಕಾರಿ ಅಧೀಕ್ಷಕ ವಿಜಯಕುಮಾರ ಜೆ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಬೆಳಗಾವಿ ಅಬಕಾರಿ ಉಪ ಅಧೀಕ್ಷಕ ರವಿ ಎಂ. ಮುರಗೋಡ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಮಂಜುನಾಥ ಮೇಳಗೇರಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಪಿರಿಟ್ ಮೌಲ್ಯ ರೂ.14 ಲಕ್ಷ, ಆರೋಪಿತನ ಮೊಬೈಲ್ ಮೌಲ್ಯ ರೂ.1,500 ಹಾಗೂ ವಾಹನದ ಮೌಲ್ಯ ರೂ.21 ಲಕ್ಷ ಸೇರಿ ಒಟ್ಟು ರೂ.35.01,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !