October 15, 2026
Thursday, October 15, 2026
spot_img

ವಿಜಯಪುರದಲ್ಲಿ ತೀವ್ರ ಬರಗಾಲ: ತಕ್ಷಣವೇ ₹25,000 ಬೆಳೆ ಪರಿಹಾರಕ್ಕೆ ನಿಖಿಲ್ ಕುಮಾರಸ್ವಾಮಿ ಒತ್ತಾಯ

ಹೊಸದಿಗಂತ ವಿಜಯಪುರ:

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗಸನಾಳ, ಹೊರ್ತಿ, ಝಳಕಿ ಹಾಗೂ ಅಂಜುಟಗಿ ಗ್ರಾಮಗಳಲ್ಲಿ ಭೀಕರ ಬರ ಪರಿಸ್ಥಿತಿಯ ಸಮೀಕ್ಷೆ ನಡೆಸಿದರು. ವಾಡಿಕೆಗಿಂತ ಶೇ. 40 ಕ್ಕೂ ಕಡಿಮೆ ಮಳೆಯಾಗಿದ್ದರಿಂದ ಒಣಗಿ ನಿಂತಿರುವ ಬೆಳೆಗಳನ್ನು ಕಂಡು ರೈತರ ಕಷ್ಟಕ್ಕೆ ಧ್ವನಿಯಾದರು.

₹25,000 ಬೆಳೆ ಪರಿಹಾರ ಹಾಗೂ ಸಾಲ ಮನ್ನಾಕ್ಕೆ ಆಗ್ರಹ

ಕೆಎಸ್‌ಎನ್‌ಡಿಎಂಸಿ ವರದಿ ಅನ್ವಯ ವಿಜಯಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ 135 ತಾಲೂಕುಗಳನ್ನು ತಕ್ಷಣವೇ ಅಧಿಕೃತ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ಅನ್ನದಾತನಿಗೆ ಪ್ರತಿ ಎಕರೆಗೆ ₹25,000 ಬೆಳೆ ಹಾನಿ ಪರಿಹಾರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಜೊತೆಗೆ ರೈತರ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಉಚಿತ ಮೇವು ಬ್ಯಾಂಕ್ ಮತ್ತು ವಿಶೇಷ ಅನುದಾನದ ಬೇಡಿಕೆ

ಮೇವಿನ ಅಭಾವದಿಂದ ರೈತರು ದನ-ಕರುಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಹೀಗಾಗಿ ಪ್ರತಿ ಹೋಬಳಿಯಲ್ಲೂ ಉಚಿತ ಮೇವು ಬ್ಯಾಂಕ್ ಆರಂಭಿಸಬೇಕು. ಕುಡಿಯುವ ನೀರು ಮತ್ತು ತುರ್ತು ಬೋರ್‌ವೆಲ್‌ಗಳಿಗಾಗಿ ಪ್ರತಿ ತಾಲೂಕಿಗೆ ₹5 ಕೋಟಿ ವಿಶೇಷ ಅನುದಾನ ನೀಡಬೇಕು. ಈ ಕುರಿತು ಜೆಡಿಎಸ್ ಅಧ್ಯಯನ ತಂಡವು ಶೀಘ್ರದಲ್ಲೇ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ಸುರೇಶ್ ಬಾಬು ಸಿ.ಟಿ., ಜೆ.ಕೆ. ಕೃಷ್ಣರೆಡ್ಡಿ ಹಾಗೂ ಬಿ.ಡಿ. ಪಾಟೀಲ ಉಪಸ್ಥಿತರಿದ್ದರು.

Must Read