ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಡೋಸಲ್ಫಾನ್ ಪೀಡಿತಳಾಗಿ ಹುಟ್ಟಿನಿಂದಲೇ ಬದುಕಿನ ಸಂಕಷ್ಟ ಎದುರಿಸುತ್ತಿರುವ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯಕಟ್ಟೆ ನಿವಾಸಿ ಒಂಭತ್ತರ ಬಾಲೆಗೆ ದಿನಸಿ ಸಾಮಾಗ್ರಿ ಮತ್ತು ಆರ್ಥಿಕ ನೆರವು ಹಸ್ತಾಂತರಿಸುವ ಮೂಲಕ ಮುಂಡಾಜೆಯ ಪುಟ್ಟ ಬಾಲಕ ರಿಯಾನ್ಷ್ ತನ್ನ 7ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾನೆ.
ಮುಂಡಾಜೆಯ ಖುಷಿ ಸ್ಟುಡಿಯೋ, ಈಶ ಮಲ್ಟಿ ಬ್ರ್ಯಾಂಡ್ ಕಾರ್ ಕೇರ್ ಸೆಂಟರ್ ಮಾಲಿಕ ರಾಕೇಶ್ ನಾಯ್ಕ್ ಅವರ ಪುತ್ರ ರಿಯಾನ್ಷ್. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಮೂಲಕ ಈ ಅರ್ಹ ಕುಟುಂಬವನ್ನು ಅವರ ಬಾಡಿಗೆ ನಿವಾಸದಲ್ಲಿ ಭೇಟಿ ಮಾಡಿ ಈ ನೆರವು ಹಸ್ತಾಂತರಿಸಿದರು.
ಕೂಲಿ ಕಾರ್ಮಿಕರಾಗಿರುವ ಪ್ರಶಾಂತ್ ಮತ್ತು ಗೃಹಿಣಿ ಲಾವಣ್ಯ ದಂಪತಿ ಪುತ್ರಿ ಮಾನ್ಯ ಎಂಡೋಸಲ್ಫಾನ್ ಪೀಡಿತೆಯಾಗಿದ್ದು ವಿಶೇಷ ಚೇತನೆಯಾಗಿದ್ದಾರೆ. ಈ ದಂಪತಿಯ ಹಿರಿ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಾಲೆ ಮಾತ್ರ ವಿಮುಕ್ತಿ ಸಂಸ್ಥೆ ನಡೆಸುವ ದಯಾ ವಿಶೇಷ ಶಾಲೆಯಲ್ಲಿ ಪ್ರತಿದಿನ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ.



