ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಡಲಾಗಿದೆ ಎಂಬ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಬಂಗ್ಲೆಗುಡ್ಡೆ ಪರಿಸರಕ್ಕೆ ಅಧಿಕಾರಿಗಳು ಭೇಟಿ
ಪ್ರಕರಣದ ಕೇಂದ್ರಬಿಂದುವಾಗಿರುವ ಬಂಗ್ಲೆಗುಡ್ಡೆ ಪರಿಸರಕ್ಕೆ ಗುರುವಾರ ಮಧ್ಯಾಹ್ನ ಬೆಂಗಳೂರಿನಿಂದ ಅಗಮಿಸಿದ ಎಫ್‌ಎಸ್‌ಎಲ್ ತಜ್ಞರು ಮತ್ತು ಸೋಕೋ ತಂಡದವರ ಜೊತೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿದ್ದು, ನೇತ್ರಾವತಿ ನದಿತಟದಲ್ಲಿ ಮತ್ತೆ ಮಹಜರು ಕಾರ್ಯ ಆರಂಭಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಸುಮಾರು ಏಳು ಶವಗಳ ಅವಶೇಷ ಪತ್ತೆಯಾಗಿದೆ ಎಂಬ ಸ್ಥಳದಲ್ಲಿ ಈ ತಂಡ ತನಿಖೆ ನಡೆಸುತ್ತಿದ್ದು, ಇದಲ್ಲದೆ ಪ್ರಕರಣದ ದೂರುದಾರ ಚಿನ್ನಯ್ಯ ಯಾನೆ ಮಾಸ್ಕ್ ಮ್ಯಾನ್ ತಂದಿರುವ ಮಾನವ ತಲೆಬುರುಡೆಯನ್ನು ಹೊರತೆಗೆಯಲಾಗಿದೆ ಎಂಬ ಬಂಗ್ಲೆಗುಡ್ಡೆಯ ಸ್ಥಳಕ್ಕೆ ಅಂದು ಅದರ ವಿಡಿಯೋ ಚಿತ್ರೀಕರಣ ನಡೆಸಿರುವ ಬಂಟ್ವಾಳ ನಿವಾಸಿ ಪ್ರದೀಪ್ ಕುಲಾಲ್ ಅವರನ್ನೂ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಮತ್ತೆ ಮಹಜರು
ಆರಂಭದಲ್ಲಿ ನಡೆಸಲಾಗಿದ್ದ ಮಹಜರು ಸಮರ್ಪಕವಾಗಿ ನಡೆದಿಲ್ಲ ಎಂಬ ಕಾರಣಕ್ಕೆ ಇದೀಗ ಮತ್ತೆ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಮೂಲಗಳ ಮಾಹಿತಿ ಪ್ರಕಾರ ಬರುಡೆ ತೆಗೆದ ಸ್ಥಳದಲ್ಲಿ ಮಾಡಲಾಗಿದ್ದ ವಿಡಿಯೋದ ಸೃಷ್ಟಿ ಮಾಡಿ ಘಟನಾ ಸ್ಥಳವನ್ನು ಎಫ್‌ಎಸ್‌ಎಲ್ ಅಧಿಕಾರಿಗಳು ಖಚಿತ ಪಡಿಸಿ ಎಸ್‌ಐಟಿ ಗೆ ವರದಿ ನೀಡಲಿದ್ದಾರೆ.



