May 22, 2026
Friday, May 22, 2026
spot_img

100 ಕೇವಲ ಒಂದು ಸಂಖ್ಯೆಯಷ್ಟೇ: ರೂಪಾಯಿ ಕುಸಿತದ ಆತಂಕಕ್ಕೆ ಬ್ರೇಕ್ ಹಾಕಿದ ಆರ್ಥಿಕ ತಜ್ಞ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಕಳೆದ ಎರಡು ದಿನಗಳಿಂದ ಸಲ್ಪ ಚೇತರಿಕೆ ಕಂಡಿದ್ದರೂ, ಇತ್ತೀಚಿನ ವರ್ಷಗಳಲ್ಲಿನ ಒಟ್ಟಾರೆ ಕುಸಿತ ಮುಂದುವರಿದಿದೆ. ಸದ್ಯ ಪ್ರತಿ ಡಾಲರ್ ಎದುರು ರೂಪಾಯಿ ಮೌಲ್ಯ 96ರ ಗಡಿ ದಾಟಿದ್ದು, ಸಾರ್ವಜನಿಕ ವಲಯದಲ್ಲಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

ಆದರೆ, ಈ ಆತಂಕದ ನಡುವೆಯೂ 16ನೇ ಹಣಕಾಸು ಆಯೋಗದ ಅಧ್ಯಕ್ಷ ಹಾಗೂ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಅರವಿಂದ್ ಪನಗರಿಯಾ ಅವರು ರೂಪಾಯಿ ಮೌಲ್ಯದ ಏರಿಳಿತದ ಕುರಿತು ಸದ್ಯಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆರ್‌ಬಿಐಗೆ ಪನಗರಿಯಾ ನೀಡಿದ ಪ್ರಮುಖ ಸಲಹೆಗಳು:

ಫಾರೆಕ್ಸ್ ನಿಧಿ ರಕ್ಷಣೆ: ರೂಪಾಯಿ ಕುಸಿತವನ್ನು ಕೃತಕವಾಗಿ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ಆಸ್ತಿ ಯನ್ನು ವ್ಯಯಿಸಬಾರದು.

ಸಹಜ ಮಾರುಕಟ್ಟೆ ಚಲನೆ: ದೇಶೀಯ ಕರೆನ್ಸಿಯ ಮೌಲ್ಯವನ್ನು ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಸಹಜವಾಗಿಯೇ ಕುಸಿಯಲು ಬಿಡುವುದು ಸೂಕ್ತ.

ಮಾನಸಿಕ ಆತಂಕದಿಂದ ದೂರವಿರಿ: ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯ 100 ತಲುಪುತ್ತದೆ ಎಂಬ ಹೈಪ್ ಕೇವಲ ಮಾನಸಿಕ ಆತಂಕವಷ್ಟೇ. 99 ಅಥವಾ 101ರಂತೆ 100 ಕೂಡ ಕೇವಲ ಒಂದು ಸಂಖ್ಯೆ. ಆರ್ಥಿಕ ನೀತಿಗಳು ಈ ಸಂಖ್ಯೆಯ ಆಧಾರದ ಮೇಲೆ ನಿರ್ಧಾರವಾಗಬಾರದು.

ಜಾಗತಿಕ ತೈಲ ಬಿಕ್ಕಟ್ಟು ಮತ್ತು ರೂಪಾಯಿ ಚೇತರಿಕೆಯ ಸೂತ್ರ:

ಜಾಗತಿಕ ಇಂಧನ ಮಾರುಕಟ್ಟೆಯ ಏರಿಳಿತಗಳಿಗೆ ಭಾರತದ ಆರ್ಥಿಕತೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ವಿವರಿಸಿರುವ ಪನಗರಿಯಾ, ಪ್ರಸಕ್ತ ಸಾಲಿನ ತೈಲ ಬಿಕ್ಕಟ್ಟು ತಾತ್ಕಾಲಿಕವಾಗಿದ್ದರೆ (3 ತಿಂಗಳಿಂದ 1 ವರ್ಷ) ರೂಪಾಯಿ ಅಪಮೌಲ್ಯದಿಂದ ದೀರ್ಘಾವಧಿಯಲ್ಲಿ ಲಾಭವೇ ಆಗಲಿದೆ ಎಂದಿದ್ದಾರೆ. ಇಂಧನ ಆಮದು ವೆಚ್ಚ ನಿಯಂತ್ರಣಕ್ಕೆ ಬಂದ ತಕ್ಷಣ, ಜಾಗತಿಕ ಹೂಡಿಕೆದಾರರು ‘ಅಗ್ಗದ ರೂಪಾಯಿ’ಯ ಲಾಭ ಪಡೆಯಲು ಭಾರತದ ಮಾರುಕಟ್ಟೆಯತ್ತ ಮುಖ ಮಾಡಲಿದ್ದಾರೆ. ಇದರಿಂದಾಗಿ ದೇಶೀಯ ಕರೆನ್ಸಿ ಮತ್ತೆ ಗಣನೀಯವಾಗಿ ಚೇತರಿಸಿಕೊಳ್ಳಲಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !