ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯ್ತನ ಮತ್ತು ವೃತ್ತಿಜೀವನದ ಜವಾಬ್ದಾರಿಗಳನ್ನು ಒಟ್ಟಿಗೆ ನಿಭಾಯಿಸುವುದು ಹೇಗೆ ಎಂಬುದಕ್ಕೆ ಆಸ್ಟ್ರೇಲಿಯಾದ ಸಂಸದೆ ಫಾತಿಮಾ ಪೇಮನ್ ಅವರು ಅತ್ಯುತ್ತಮ ನಿದರ್ಶನವಾಗಿದ್ದಾರೆ. ಈ ವಾರ ಆಸ್ಟ್ರೇಲಿಯಾದ ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನಲ್ಲಿ ‘ಆನ್‌ಲೈನ್ ಸುರಕ್ಷತಾ ತಿದ್ದುಪಡಿ ಮಸೂದೆ 2026’ ಕುರಿತು ಗಂಭೀರ ಚರ್ಚೆ ನಡೆಯುತ್ತಿದ್ದ ವೇಳೆ, ಫಾತಿಮಾ ಅವರು ತಮ್ಮ ಪುಟ್ಟ ಹಸುಗೂಸು ಆಲಿಯಾಳನ್ನು ಮಡಿಲಲ್ಲಿ ಎತ್ತಿಕೊಂಡೇ ಕಲಾಪದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಕಲಾಪದಿಂದ ದೂರ ಉಳಿಯುವ ಬದಲು, ಮಗುವನ್ನು ಜೊತೆಯಲ್ಲೇ ಕರೆತಂದು ತಮ್ಮ ಸಂಸದೀಯ ಕರ್ತವ್ಯವನ್ನು ನಿಭಾಯಿಸಿದ ಈ ಹೃದಯಸ್ಪರ್ಶಿ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಕೆಲಸ ಮಾಡುವ ತಾಯಂದಿರಿಗೆ, ವಿಶೇಷವಾಗಿ ಮಕ್ಕಳ ಪಾಲನೆ ಮತ್ತು ವೃತ್ತಿ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳಲು ಹೆಣಗಾಡುವ ಮಹಿಳೆಯರಿಗೆ ಪೂರಕ ವಾತಾವರಣ ಕಲ್ಪಿಸುವ ಅಗತ್ಯವನ್ನು ಅವರ ಈ ನಡೆ ಎತ್ತಿ ತೋರಿಸಿದೆ.
ಇತಿಹಾಸ ಸೃಷ್ಟಿಸಿದ್ದ ಫಾತಿಮಾ ಪೇಮನ್
ಪಶ್ಚಿಮ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುವ ಫಾತಿಮಾ ಪೇಮನ್ ಅವರು ಸಂಸತ್ತಿನಲ್ಲಿ ಪೋಷಕತ್ವವನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಸದಾ ಧ್ವನಿ ಎತ್ತುತ್ತಾ ಬಂದಿದ್ದಾರೆ. 2026ರ ಆರಂಭದಲ್ಲಿ ಸಂಸದೆಯಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಮಗುವಿಗೆ ಜನ್ಮ ನೀಡಿದ ಪಶ್ಚಿಮ ಆಸ್ಟ್ರೇಲಿಯಾದ ಮೊದಲ ಸೆನೆಟರ್ ಎಂಬ ಐತಿಹಾಸಿಕ ದಾಖಲೆಯನ್ನು ಅವರು ಬರೆದಿದ್ದರು.
ಇದನ್ನೂ ಓದಿ:
ಯಾರು ಈ ಫಾತಿಮಾ ಪೇಮನ್?
ಅಫ್ಘಾನಿಸ್ತಾನದಲ್ಲಿ ಜನಿಸಿದ ಫಾತಿಮಾ ಅವರು ಬಾಲ್ಯದಲ್ಲೇ ಕುಟುಂಬದೊಂದಿಗೆ ಆಸ್ಟ್ರೇಲಿಯಾಕ್ಕೆ ವಲಸೆ ಬಂದಿದ್ದರು. 2022ರಲ್ಲಿ ಆಸ್ಟ್ರೇಲಿಯನ್ ಲೇಬರ್ ಪಕ್ಷದಿಂದ ಸೆನೆಟ್‌ಗೆ ಆಯ್ಕೆಯಾದ ಅವರು, ಆಸ್ಟ್ರೇಲಿಯಾ ಸಂಸತ್ತಿಗೆ ಆಯ್ಕೆಯಾದ ಅತ್ಯಂತ ಕಿರಿಯ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಳಿಕ ಲೇಬರ್ ಪಕ್ಷವನ್ನು ತೊರೆದ ಅವರು, ಪ್ರಸ್ತುತ ‘ಆಸ್ಟ್ರೇಲಿಯಾಸ್ ವಾಯ್ಸ್’ ಎಂಬ ಸ್ವತಂತ್ರ ರಾಜಕೀಯ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.



