ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಕಾಕ್ರೋಜ್ ಜನತಾ ಪಾರ್ಟಿ ಮೇ. 24 ರಂದು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿದಾಡುತ್ತಿದ್ದು, ಈ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು, ಯಾವುದೇ ಕಾರ್ಯಕ್ರಮಕ್ಕೂ ಅನುಮತಿ ನೀಡಲ್ಲ ಎಂದು ಸ್ಪಷ್ಟಪಡಿಸಿದೆ.
ಬೆಂಗಳೂರು ಪೊಲೀಸರು ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಟೌನ್ ಹಾಲ್ ಬಳಿ ಕಾರ್ಯಕ್ರಮ ಆಯೋಜನೆ ಕುರಿತು ಯಾವುದೇ ರೀತಿಯ ಅನುಮತಿ ಕೋರಿ ಅರ್ಜಿ ಬಂದಿಲ್ಲ. ಒಂದು ವೇಳೆ ಬಂದರೂ ಯಾವುದೇ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ
ಈಗಾಗಲೇ ಹೈಕೋರ್ಟ್ ನಿಂದ ಫ್ರೀಡಂ ಪಾರ್ಕ್ ಹೊರತುಪಡಿಸಿ, ಬೇರೆ ಯಾವುದೇ ಸ್ಥಳಗಳಲ್ಲಿ ಧರಣಿ, ಪ್ರತಿಭಟನಾ ರ್ಯಾಲಿ ನಡೆಸಲು ಅವಕಾಶ ಇಲ್ಲ ಎಂದು ಆದೇಶ ಇದೆ. ಹೀಗಾಗಿ ಮನವಿ ಬಂದರೂ ಸಹ ಟೌನ್ ಹಾಲ್ ಬಳಿ ಅನುಮತಿ ನೀಡಲ್ಲ. ಒಂದು ವೇಳೆ ಉಲ್ಲಂಘಿಸಿ ಜನರು ಬಂದು ಸೇರುವುದು ನ್ಯಾಯಾಲಯ ಆದೇಶದ ಸ್ಪಷ್ಪ ಉಲ್ಲಂಘನೆಯಾಗಿರುತ್ತದೆ. ಸಾರ್ವಜನಿಕರು ಇಂತ ಪೋಸ್ಟ್ ಗಳನ್ನ ಹಂಚಿಕೊಳ್ಳಬಾರದು ಎಂದು ಸೂಚಿಸಿದ್ದಾರೆ.
ವೈರಲ್ ಆದ ಪೋಸ್ಟ್ ನಲ್ಲಿ ಏನಿದೆ?
ಕಾಕ್ರೋಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದು ವೈರಲ್ ಆಗಿದ್ದು, ಅದರಲ್ಲಿ,ಯುವಕರಿಗೆ ಭವಿಷ್ಯವಿಲ್ಲ. ಬೆಲೆ ಏರಿಕೆಯಿಂದ ಬದುಕಿಲ್ಲ. ವಿದ್ಯಾರ್ಥಿಗಳಿಗೆ ನೀಟು ಪರೀಕ್ಷೆ ಇಲ್ಲ. ನಮ್ಮ ಮತ ಕದಿಯುತ್ತಿದ್ದಾರೆ. ಬನ್ನಿ ಕಾಕ್ರೋಜ್ ಗಳ ಸಂದೇಶ ನೀಡೋಣ.ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆ ಇಲ್ಲ. ಪ್ರಜೆಗಳು ಕೈ ಜೋಡಿಸುವುದೇ ಸಂಘಟನೆ . ಟೌನ್ಹಾಲ್ ಬಳಿ ಮೇ 24ರಂದು ಬೆಳಗ್ಗೆ 11ಗಂಟೆಗೆ ಶಾಂತಿಯುತ ಮಾನವ ಸರಪಳಿ ನಿರ್ಮಾಣ ಎಂದು ಪೋಸ್ಟ್ ಮಾಡಲಾಗಿತ್ತು.



