ಸಮುದ್ರ ತೀರದಿಂದ ಕಾಡಿನವರೆಗೆ ಪ್ರಕೃತಿಯ ಅನೇಕ ಭಾಗಗಳಲ್ಲಿ ಪ್ರಮುಖ ಪಾತ್ರ ವಹಿಸುವ ಆಮೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.
ಸಾವಿರಾರು ವರ್ಷಗಳಿಂದ ಭೂಮಿಯ ಮೇಲೆ ಜೀವಂತವಾಗಿರುವ ಈ ವಿಶಿಷ್ಟ ಜೀವಿಗಳು ಈಗ ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಅಕ್ರಮ ಬೇಟೆಯಿಂದ ಅಪಾಯದ ಅಂಚಿನಲ್ಲಿವೆ. ಆಮೆಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ.
ವಿಶ್ವ ಆಮೆ ದಿನದ ಇತಿಹಾಸ
2000ನೇ ವರ್ಷದಲ್ಲಿ ಅಮೆರಿಕದ American Tortoise Rescue ಸಂಸ್ಥೆ ಮೊದಲ ಬಾರಿಗೆ ವಿಶ್ವ ಆಮೆ ದಿನವನ್ನು ಆರಂಭಿಸಿತು. ಆಮೆಗಳು ಮತ್ತು ಅವುಗಳ ವಾಸಸ್ಥಳಗಳನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ. ನಂತರ ಇದು ವಿಶ್ವದ ಅನೇಕ ದೇಶಗಳಲ್ಲಿ ಪರಿಸರ ಜಾಗೃತಿ ದಿನವಾಗಿ ರೂಪುಗೊಂಡಿತು.
ಇದನ್ನೂ ಓದಿ:
ಆಮೆಗಳ ಮಹತ್ವ ಏನು?
ಆಮೆಗಳು ಸಮುದ್ರ ಮತ್ತು ಪರಿಸರದ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಮುದ್ರದ ಹುಲ್ಲು ಪ್ರದೇಶಗಳನ್ನು ಆರೋಗ್ಯಕರವಾಗಿಡುವುದು, ಆಹಾರ ಸರಪಳಿಯನ್ನು ಸಮತೋಲನದಲ್ಲಿಡುವುದು ಸೇರಿದಂತೆ ಹಲವು ಪರಿಸರ ಸೇವೆಗಳನ್ನು ಈ ಜೀವಿಗಳು ಮಾಡುತ್ತವೆ. ಆಮೆಗಳ ಸಂಖ್ಯೆ ಕಡಿಮೆಯಾಗುವುದು ಪರಿಸರ ವ್ಯವಸ್ಥೆಯ ಮೇಲೂ ಬಹಲ್ ದೊಡ್ಡ ಪರಿಣಾಮ ಬೀರುತ್ತದೆ.
ಹೆಚ್ಚುತ್ತಿರುವ ಅಪಾಯ
ಪ್ಲಾಸ್ಟಿಕ್ ತ್ಯಾಜ್ಯ, ಸಮುದ್ರ ಮಾಲಿನ್ಯ, ಕಡಲತೀರ ನಾಶ ಮತ್ತು ಅಕ್ರಮ ಬೇಟೆಯಿಂದ ಅನೇಕ ಆಮೆ ಪ್ರಭೇದಗಳು ಅಳಿವಿನ ಅಂಚಿಗೆ ತಲುಪಿವೆ. ವಿಶೇಷವಾಗಿ ಸಮುದ್ರ ಆಮೆಗಳು ಪ್ಲಾಸ್ಟಿಕ್ ತಿನ್ನುವುದರಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.



