ಹೊಸದಿಗಂತ ವರದಿ ಕಲಬುರಗಿ:
ಗಲಭೇಕೋರರ ಮೇಲಿನ ಕೇಸ್ ವಾಪಸ್ ಪಡೆದಿರುವುದನ್ನು ಖಂಡಿಸಿ ಸೋಮವಾರ ಕಲಬುರಗಿಯಲ್ಲಿ ಶಿವಸೇನೆ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ತಕ್ಷಣ ನಿರ್ಧಾರ ಹಿಂಪಡೆಯುವಂತೆ ಆಗ್ರಹಿಸಿದರು.
ಮುಸ್ಲಿಂ ತುಷ್ಟೀಕರಣವೇ ಕಾಂಗ್ರೆಸ್ ಸರ್ಕಾರದ ಅಜೆಂಡಾ
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಾಂಗ್ರೆಸ್ ಸರ್ಕಾರ ಕೇವಲ ಮುಸ್ಲಿಂ ಓಲೈಕೆಗೆ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು. “ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವವರಿಗೆ ರಕ್ಷಣೆ ನೀಡುವ ಕೆಲಸ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.
ಆಳಂದ ದರ್ಗಾ ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ವಾಪಸ್ಗೆ ವಿರೋಧ
2022ರಲ್ಲಿ ಆಳಂದ ಪಟ್ಟಣದ ವಿವಾದಿತ ಲಾಡ್ಲೆ ಮಶಾಶ್ ದರ್ಗಾದಲ್ಲಿ ನಡೆದ ಶಿವಲಿಂಗ ಪೂಜೆ ವೇಳೆ ಡಿಸಿ, ಎಸ್ಪಿ ಹಾಗೂ ಜನಪ್ರತಿನಿಧಿಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣದ ಆರೋಪಿಗಳ ವಿರುದ್ಧದ ಕೇಸ್ ವಾಪಸ್ ಪಡೆದಿರುವುದನ್ನು ಶಿವಸೇನೆ ಖಂಡಿಸಿತು.
ಇದನ್ನೂ ಓದಿ:
“ಹಿಂದುಗಳ ಮೇಲೆ ದಾಳಿ ಹೆಚ್ಚುತ್ತಿದೆ” ಆರೋಪ
ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯಿಂದಲೇ ರಾಜ್ಯದಲ್ಲಿ ಹಿಂದುಗಳ ಮೇಲೆ ದಾಳಿ ಮತ್ತು ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದರು. “ಭಟ್ಕಳದಲ್ಲಿ ದೇವಾಲಯ ಧ್ವಂಸ ಪ್ರಕರಣ ನಡೆದಿದ್ದರೂ ಸರ್ಕಾರ ಮೌನವಾಗಿದೆ” ಎಂದು ಟೀಕಿಸಿದರು.
ಕೇಸ್ ವಾಪಸ್ ಪಡೆಯದಿದ್ದರೆ ಕಾನೂನು ಹೋರಾಟ ಎಚ್ಚರಿಕೆ
“ಪೊಲೀಸರು ಮತ್ತು ಅಧಿಕಾರಿಗಳ ಮೇಲೆ ದಾಳಿ ಮಾಡಿದವರ ವಿರುದ್ಧದ ಪ್ರಕರಣ ವಾಪಸ್ ಪಡೆಯುವುದು ತಪ್ಪು. ಕೂಡಲೇ ಸರ್ಕಾರ ನಿರ್ಧಾರ ಹಿಂಪಡೆಯಬೇಕು. ಇಲ್ಲವಾದರೆ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮುಖಂಡ ಹರ್ಷ ಗುತ್ತೇದಾರ್, ಶಿವಸೇನೆ ಜಿಲ್ಲಾಧ್ಯಕ್ಷ ಗುರುಶಾಂತ್ ಟೆಂಗಳಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.



