August 24, 2026
Monday, August 24, 2026
spot_img

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಚಿರತೆ ಓಡಾಟ: ವಾಹನ ಸವಾರರಿಗೆ ಅರಣ್ಯ ಇಲಾಖೆಯಿಂದ ಕಟ್ಟೆಚ್ಚರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಡಾನೆಗಳ ಹಾವಳಿಯಿಂದ ಸದಾ ಸುದ್ದಿಯಲ್ಲಿರುವ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂಪರ್ಕ ಕೊಂಡಿ ಚಾರ್ಮಾಡಿ ಘಾಟಿಯಲ್ಲಿ ಈಗ ಚಿರತೆ ಆತಂಕ ಶುರುವಾಗಿದೆ. ಘಾಟ ರಸ್ತೆಯಲ್ಲಿ ರಾತ್ರಿ ವೇಳೆ ಚಿರತೆಯೊಂದು ರಾಜಾರೋಷವಾಗಿ ಓಡಾಡುತ್ತಿರುವುದು ಕಂಡುಬಂದಿದ್ದು, ಪ್ರಯಾಣಿಕರು ಮತ್ತು ವಾಹನ ಸವಾರರಲ್ಲಿ ತೀವ್ರ ಭಯದ ವಾತಾವರಣ ನಿರ್ಮಿಸಿದೆ.

ಘಾಟಿಯ 11ನೇ ತಿರುವಿನ ಬಳಿ, ಬೇಲೂರು 62 ಕಿ.ಮೀ. ಮೈಲಿಗಲ್ಲು ಸಮೀಪ ರಸ್ತೆ ಬದಿಯಲ್ಲಿ ಚಿರತೆ ಸಂಚರಿಸುತ್ತಿರುವ ದೃಶ್ಯವನ್ನು ವಾಹನ ಸವಾರರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಮೊದಲಿಗೆ ರಸ್ತೆ ಬದಿಯ ತಡೆಗೋಡೆ ಮೇಲೆ ಕುಳಿತಿದ್ದ ಚಿರತೆ, ಆ ಬಳಿಕ ರಸ್ತೆಯಲ್ಲೇ ಅಡ್ಡಾಡಿದ್ದು, ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಮಾರ್ಗದಲ್ಲಿ ಒಂದೇ ತಿಂಗಳಲ್ಲಿ ಇದು ಮೂರನೇ ಬಾರಿ ಚಿರತೆ ಕಾಣಿಸಿಕೊಂಡಿರುವು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಸವಾರರಲ್ಲಿ ಆತಂಕ:

ಚಾರ್ಮಾಡಿ ಘಾಟಿಯಲ್ಲಿ ಈಗಾಗಲೇ ದಟ್ಟ ಮಳೆ ಮತ್ತು ಮಂಜು ಮುಸುಕಿದ ವಾತಾವರಣವಿದ್ದು, ಕಣ್ಣಿಟ್ಟರೆ ದಾರಿ ಕಾಣದ ಪರಿಸ್ಥಿತಿ ಇದೆ. ಇದರ ನಡುವೆ ಚಿರತೆ ಪ್ರತ್ಯಕ್ಷವಾಗಿರುವುದು ವಾಹನ ಸವಾರರ ನಿದ್ದೆಗೆಡಿಸಿದೆ.

ಅರಣ್ಯ ಇಲಾಖೆಯ ಮಹತ್ವದ ಸೂಚನೆ:

ಘಾಟಿ ಮಾರ್ಗದಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಾಗಿರುವುದರಿಂದ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ರಾತ್ರಿ ವೇಳೆ ಅನಗತ್ಯವಾಗಿ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಬಾರದು ಮತ್ತು ಸೆಲ್ಫಿ ಹಾಗೂ ಫೋಟೋ ತೆಗೆಯಲು ಮುಂದಾಗಬಾರದು ಎಂದು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಇದನ್ನೂ ಓದಿ:

ಹೆಚ್ಚಿದ ವನ್ಯಜೀವಿಗಳ ಹಾವಳಿ:

ಈ ಹಿಂದೆ ಚಾರ್ಮಾಡಿ ಘಾಟಿಯಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಸವಾರರ ಮೇಲೆ ದಾಳಿಗೆ ಮುಂದಾಗಿದ್ದ ಘಟನೆಗಳು ನಡೆದಿದ್ದವು. ಇದೀಗ ಚಿರತೆಗಳ ಕಾಟವೂ ಆರಂಭವಾಗಿರುವುದು ಪ್ರಯಾಣಿಕರ ಆತಂಕವನ್ನು ಇಮ್ಮಡಿಗೊಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !