ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಸುದೀರ್ಘ ಬೇಸಿಗೆ ರಜೆ ಮುಗಿಯುತ್ತಾ ಬಂದಿದ್ದು, ಮೇ 29 ರಿಂದ ಹೊಸ ಶೈಕ್ಷಣಿಕ ವರ್ಷದ (2026-27) ತರಗತಿಗಳು ಅಧಿಕೃತವಾಗಿ ಆರಂಭವಾಗಲಿವೆ. ಶಾಲಾ ಪುನರಾರಂಭಕ್ಕೆ ಕೇವಲ ಮೂರೇ ದಿನ ಬಾಕಿ ಇರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಪ್ರವೇಶಾತಿ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಟ್ಟುನಿಟ್ಟಿನ ಹೊಸ ಗೈಡ್‌ಲೈನ್ಸ್ ಜಾರಿ ಮಾಡಿದೆ.
ಇಲಾಖೆಯ ಲೇಟೆಸ್ಟ್ ಮಾರ್ಗಸೂಚಿಗಳ ವಿವರ
1ನೇ ತರಗತಿ ಪ್ರವೇಶಕ್ಕೆ ’60 ದಿನಗಳ’ ವಯೋಮಿತಿ ಸಡಿಲಿಕೆ
ಪೋಷಕರ ತೀವ್ರ ಗೊಂದಲಕ್ಕೆ ತೆರೆ ಎಳೆದಿರುವ ಶಿಕ್ಷಣ ಇಲಾಖೆ, ಈ ವರ್ಷಕ್ಕೆ ಮಾತ್ರ ಅನ್ವಯವಾಗುವಂತೆ ವಯಸ್ಸಿನ ಮಿತಿಯಲ್ಲಿ ಭಾರಿ ವಿನಾಯಿತಿ ನೀಡಿದೆ. ಜೂನ್ 1, 2026 ರ ವೇಳೆಗೆ 5 ವರ್ಷ 10 ತಿಂಗಳು ತುಂಬಿರುವ ಮಗುವಿಗೂ 1ನೇ ತರಗತಿಗೆ ನೇರ ಪ್ರವೇಶ ನೀಡಬಹುದು. ಹೊಸ ವಯೋಮಿತಿಯ ಅನ್ವಯ ಪ್ರವೇಶಾತಿ ಪಡೆಯಲು ಅನುವಾಗುವಂತೆ ಸರ್ಕಾರದ SATS ಸಾಫ್ಟ್‌ವೇರ್ ಅನ್ನು ಅಪ್ಡೇಟ್ ಮಾಡಲಾಗಿದೆ. ಈ 2 ತಿಂಗಳ ವಿನಾಯಿತಿಯು ಪ್ರೀ-ಪ್ರೈಮರಿ ದಾಖಲಾತಿಗಳಿಗೂ ಅನ್ವಯವಾಗುತ್ತದೆ.
ಶಾಲೆಗಳಿಗೆ ಕಡ್ಡಾಯ ಸುರಕ್ಷತಾ ಮತ್ತು ಮೂಲಸೌಕರ್ಯ ನಿಯಮಗಳು
ಶಾಲೆ ಆರಂಭಕ್ಕೂ ಮುನ್ನ ಕುಡಿಯುವ ನೀರು, ಶೌಚಾಲಯ, ಕಿಚನ್ ರೂಮ್ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯ ಕಡ್ಡಾಯ ಆದೇಶ ನೀಡಿದೆ. ಹಾಗೆಯೇ ಮೇ 29ರ ಮೊದಲ ದಿನದಿಂದಲೇ ಮಕ್ಕಳಿಗೆ ಬಿಸಿಯೂಟ ವಿತರಣೆ ಆರಂಭವಾಗಬೇಕು. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳ ಬಳಿ ಮಕ್ಕಳು ಹೋಗದಂತೆ ನಿಗಾ ವಹಿಸಬೇಕು ಎಂದು ಶಿಕ್ಷಣ ಇಲಾಖೆಯ ಎಚ್ಚರಿಸಿದೆ.
ಹೊಸ ಶೈಕ್ಷಣಿಕ ವೇಳಾಪಟ್ಟಿ:
ಮೊದಲನೇ ಅವಧಿ ಮೇ 29 ರಿಂದ ಅಕ್ಟೋಬರ್ 2ರವರೆಗೆ ಇದ್ದು, ಅಕ್ಟೋಬರ್ 3 ರಿಂದ 21, 2026ರ ವರೆಗೆ ಒಟ್ಟು 18 ದಿನಗಳ ವರೆಗೆ ದಸರಾ ರಜೆ ಇರುತ್ತದೆ. ಎರಡನೇ ಅವಧಿ ಅಕ್ಟೋಬರ್ 22, 2026 ರಿಂದ ಏಪ್ರಿಲ್ 10, 2027ರವರೆಗೆ ಇದ್ದು, ಏಪ್ರಿಲ್ 11, 2027 ರಿಂದ ಬೇಸಿಗೆ ರಜೆ ಪ್ರಾರಂಭವಾಗುತ್ತದೆ.
ಪಠ್ಯಪುಸ್ತಕ ವಿತರಣೆ ಮತ್ತು ಪ್ರವೇಶಾತಿ ಗಡುವು:
ಜೂನ್ 1 ರಿಂದ ರಾಜ್ಯಾದ್ಯಂತ “ಶಾಲಾ ಪ್ರಾರಂಭೋತ್ಸವ” ಆಚರಿಸಿ, ಹಬ್ಬದ ವಾತಾವರಣದಲ್ಲಿ ಮಕ್ಕಳನ್ನು ಬರಮಾಡಿಕೊಳ್ಳಲಾಗುತ್ತದೆ. ಅಂದಿನಿಂದಲೇ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಕರೆತರಲು ವಿಶೇಷ ದಾಖಲಾತಿ ಆಂದೋಲನ ಆರಂಭವಾಗಲಿದೆ.
ಜೂನ್ ಮೊದಲ ವಾರದೊಳಗೆ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯನ್ನು ಪೂರ್ಣಗೊಳಿಸಬೇಕು. ಎಲ್ಲಾ ಶಾಲೆಗಳ ಸಾಮಾನ್ಯ ಪ್ರವೇಶಾತಿ ಪ್ರಕ್ರಿಯೆಗಳನ್ನು ಮುಗಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ.
ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ:
ಶಿಕ್ಷಕರು ಮತ್ತು ಮುಖ್ಯಸ್ಥರು ತಮ್ಮ ದೈನಂದಿನ ಹಾಜರಾತಿಯನ್ನು ಇಲಾಖೆಯ ಅಧಿಕೃತ KAAMS ಮೊಬೈಲ್ ಆಪ್ ಮೂಲಕವೇ ಕಡ್ಡಾಯವಾಗಿ ದಾಖಲಿಸಬೇಕು. ಶಾಲೆಗಳು ಗೈಡ್‌ಲೈನ್ಸ್ ಪಾಲಿಸುತ್ತಿವೆಯೇ ಎಂದು ಪರಿಶೀಲಿಸಲು ತಾಲೂಕು ಮಟ್ಟದ ಅಧಿಕಾರಿಗಳ ತಂಡವು ಪ್ರತಿದಿನ ಕಡ್ಡಾಯವಾಗಿ 3 ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಿದೆ.



