ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಭರ್ಜರಿ ಕಾರ್ಯಾಚರಣೆಗೆ ಇಳಿದಿದೆ. ಆಹಾರ ಸುರಕ್ಷತೆ ಮತ್ತು ಜಾಗೃತಿ ಇಲಾಖೆಯು ಬುಧವಾರ (ಅ. 14) ರಾಜ್ಯಾದ್ಯಂತ ವಿಶೇಷ ತಪಾಸಣಾ ಅಭಿಯಾನವನ್ನು ನಡೆಸಿದ್ದು, ಒಟ್ಟು 80 ಪ್ರಮುಖ ಸಿಹಿ ತಿಂಡಿ ತಯಾರಿಕೆ ಮತ್ತು ಮಾರಾಟ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಸಾರ್ವಜನಿಕರ ಬಳಕೆಗೆ ಯೋಗ್ಯವೇ ಎಂಬುದನ್ನು ಪರೀಕ್ಷಿಸಲು ಬರೋಬ್ಬರಿ 125 ಸ್ವೀಟ್ ಸ್ಯಾಂಪಲ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಸಚಿವ ಯು.ಟಿ. ಖಾದರ್ ಸೂಚನೆ ಮೇರೆಗೆ ಆಕ್ಷನ್
ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ ಕಮಿಷನರ್ ಅವರು ಗುರುವಾರ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರ ನೇರ ಆದೇಶದ ಮೇರೆಗೆ ಈ ದಾಳಿ ನಡೆದಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಅಡಿಯಲ್ಲಿ ತಜ್ಞರ ತಂಡಗಳು ಈ ಆಪರೇಷನ್ ನಡೆಸಿವೆ. ವಶಪಡಿಸಿಕೊಳ್ಳಲಾದ ಎಲ್ಲಾ 125 ಸಿಹಿ ತಿಂಡಿಗಳ ಮಾದರಿಗಳನ್ನು ಗುಣಮಟ್ಟದ ಮೌಲ್ಯಮಾಪನಕ್ಕಾಗಿ ಸರ್ಕಾರದ ಅಧಿಕೃತ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ ಎಂದು ತೀಸಿದೆ.
ಬೇಕರಿಗಳಲ್ಲಿ ಪತ್ತೆಯಾದ ಅಶುಚಿತ್ವ
ಅಧಿಕಾರಿಗಳ ತಪಾಸಣೆಯ ವೇಳೆ ಸಿಹಿ ಅಂಗಡಿಗಳಲ್ಲಿ ನಿಯಮ ಉಲ್ಲಂಘನೆಗಳು ಬೆಳಕಿಗೆ ಬಂದಿವೆ. ಸಿಹಿ ತಿಂಡಿಗಳನ್ನು ತಯಾರಿಸುವ ಹಾಗೂ ಶೇಖರಣೆ ಮಾಡುವ ಜಾಗಗಳು ಅಶುಚಿಯಿಂದ ಕೂಡಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ, ಅಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಬಳಿ ಯಾವುದೇ ಕಡ್ಡಾಯ ವೈದ್ಯಕೀಯ ಪ್ರಮಾಣಪತ್ರಗಳು ಇರಲಿಲ್ಲ. ಅತಿ ದೊಡ್ಡ ಆಘಾತಕಾರಿ ವಿಷಯವೆಂದರೆ, ಕೆಲವು ಪ್ರಸಿದ್ಧ ಮಳಿಗೆಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಕಡ್ಡಾಯ ಪರವಾನಗಿ ಅಥವಾ ಯಾವುದೇ ನೋಂದಣಿ ಇಲ್ಲದೆಯೇ ಅಕ್ರಮವಾಗಿ ಗ್ರಾಹಕರಿಗೆ ತಿಂಡಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.
10 ಘಟಕಗಳಿಗೆ ನೋಟಿಸ್
ಈ ಗಂಭೀರ ಲೋಪದೋಷಗಳ ಬೆನ್ನಲ್ಲೇ ಆಹಾರ ನಿಯಮಗಳನ್ನು ಗಾಳಿಗೆ ತೂರಿ ಗ್ರಾಹಕರ ಜೀವದ ಜೊತೆ ಆಟವಾಡುತ್ತಿದ್ದ 10 ಪ್ರಮುಖ ಸಿಹಿ ತಯಾರಿಕಾ ಘಟಕಗಳು ಮತ್ತು ಆಹಾರ ಉದ್ಯಮಿಗಳಿಗೆ ಇಲಾಖೆ ತಕ್ಷಣವೇ ನೋಟಿಸ್ ಜಾರಿ ಮಾಡಿದೆ. 2011 ರ ನಿಯಮಾವಳಿಗಳ ಅನ್ವಯ ಇವುಗಳ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಹಬ್ಬದ ಸಮಯದಲ್ಲಿ ಕಲಬೆರಕೆ ಹಾಗೂ ಕಳಪೆ ದರ್ಜೆಯ ಸ್ವೀಟ್ಗಳ ಮಾರಾಟ ತಡೆಯಲು ಈ ಕಟ್ಟುನಿಟ್ಟಿನ ತಪಾಸಣಾ ಅಭಿಯಾನ ಮುಂಬರುವ ದಿನಗಳಲ್ಲೂ ನಿರಂತರವಾಗಿ ಮುಂದುವರಿಯಲಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಚಲ್ಲಾಟವಾಡುವ ಮಾಲೀಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು ಎಂದು ಇಲಾಖೆ ಕಟ್ಟುನಿಟ್ಟಿನ ವಾರ್ನಿಂಗ್ ನೀಡಿದೆ.



