ಹೊಸದಿಗಂತ ವರದಿ ಮಡಿಕೇರಿ:
ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ವ್ಯಾಪ್ತಿಯ ಅಭ್ಯತ್ ಮಂಗಲ ಒಂಟಿಯಂಗಡಿಯಲ್ಲಿ ನಡೆದಿದೆ.
ಅಭ್ಯತ್ ಮಂಗಲ ಒಂಟಿಯಂಗಡಿ ನಿವಾಸಿ ಅಂಚೆಮನೆ ಸುಧಕುಮಾರ್(56) ಎಂಬವರೇ ಆನೆ ದಾಳಿಯಿಂದ ಗಾಯಗೊಂಡವರು.
ಮಂಗಳವಾರ ರಾತ್ರಿ ತಮ್ಮ ಮನೆಯ ಸಮೀಪ ನಡೆದುಕೊಂಡು ಹೋಗುತ್ತಿರುವಾಗ ಏಕಾಏಕಿ ಎದುರಾದ ಕಾಡಾನೆ ಸುಧ ಕುಮಾರ್ ಮೇಲೆ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಗಾಯಗೊಂಡ ವ್ಯಕ್ತಿಯ ಕಿರುಚಾಟ ಕೇಳಿ ಸ್ಥಳೀಯರು ಹೊರಬಂದು ಕಾಡಾನೆಯನ್ನು ಓಡಿಸಿದ್ದಾರೆ.
ಕಾಡಾನೆ ದಾಳಿಯಿಂದ ಗಂಭೀರವಾದ ಗಾಯಗೊಂಡಿದ್ದ ಸುಧಕುಮಾರ್ ಅವರನ್ನು ಕೂಡಲೇ ಅಮ್ಮತ್ತಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.



