ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಮತ್ತು ಫೆಡರೇಶನ್ ಆಫ್ ವೆಸ್ಟರ್ನ್ ಇಂಟರ್ನ್ಯಾಷನಲ್ ಸಿನಿ ಎಂಪ್ಲಾಯೀಸ್ (FWICE) ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಬಹುನಿರೀಕ್ಷಿತ ‘ಡಾನ್ 3’ ಚಿತ್ರದ ವಿವಾದವನ್ನು ಬಗೆಹರಿಸಲು ಒಕ್ಕೂಟವು ನೀಡಿದ್ದ ಮೂರು ಸರಣಿ ವಿನಂತಿಗಳನ್ನು ರಣವೀರ್ ಸಿಂಗ್ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು FWICE ಗಂಭೀರ ಆರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಬೈನಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿರುವ ಒಕ್ಕೂಟವು, ರಣವೀರ್ ಸಿಂಗ್ ವಿರುದ್ಧ ‘ಅಸಹಕಾರ ನಿರ್ದೇಶನ’ ಹೊರಡಿಸಿ ಚಿತ್ರರಂಗದಿಂದ ತಾತ್ಕಾಲಿಕ ಬಹಿಷ್ಕಾರ ಹಾಕಿದೆ.
ಏನಿದು ‘ಡಾನ್ 3’ ವಿವಾದ?
ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್ 3’ ಚಿತ್ರದ ಶೂಟಿಂಗ್ ಆರಂಭಕ್ಕೆ ಕೇವಲ 3 ವಾರಗಳಿದ್ದಾಗ ರಣವೀರ್ ಸಿಂಗ್ ಹಠಾತ್ ಆಗಿ ಚಿತ್ರದಿಂದ ಹೊರನಡೆದಿದ್ದರು. ಇದರಿಂದಾಗಿ ತಮಗೆ ಪ್ರೀ-ಪ್ರೊಡಕ್ಷನ್ ಹಂತದಲ್ಲೇ ಸುಮಾರು 45 ಕೋಟಿ ನಷ್ಟವಾಗಿದೆ ಎಂದು ನಿರ್ಮಾಪಕರು ಒಕ್ಕೂಟಕ್ಕೆ ದೂರು ನೀಡಿದ್ದರು.
ಈ ನಷ್ಟದ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲು FWICE ಸಂಸ್ಥೆಯು ರಣವೀರ್ ಸಿಂಗ್‌ಗೆ ಖುದ್ದಾಗಿ ಹಾಜರಾಗುವಂತೆ 3 ಬಾರಿ ಅಧಿಕೃತ ನೋಟಿಸ್ ಕಳುಹಿಸಿತ್ತು. ಆದರೆ ರಣವೀರ್ ಸಿಂಗ್ ಈ ಯಾವುದೇ ವಿನಂತಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ಆಕ್ರೋಶ ಹೊರಹಾಕಿದ್ದಾರೆ.
ಮೌನ ಮುರಿದ ರಣವೀರ್ ಸಿಂಗ್
ವಿವಾದ ತೀವ್ರಗೊಂಡು ಚಿತ್ರರಂಗದಿಂದ ಬಹಿಷ್ಕಾರದ ಭೀತಿ ಎದುರಾದ ಬೆನ್ನಲ್ಲೇ ರಣವೀರ್ ಸಿಂಗ್ ತಮ್ಮ ವಕ್ತಾರರ ಮೂಲಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವೃತ್ತಿಪರ ಚರ್ಚೆಗಳು ಮತ್ತು ವೈಯಕ್ತಿಕ ಸಂಬಂಧಗಳನ್ನು ಗೌರವ, ಪ್ರೌಢಿಮೆ ಹಾಗೂ ಘನತೆಯಿಂದ ನಿಭಾಯಿಸಬೇಕು ಎಂದು ನಂಬಿರುವುದರಿಂದ ತಾವು ಈ ವಿಷಯದಲ್ಲಿ ಮಾಧ್ಯಮಗಳ ಮುಂದೆ ಬರದೆ ಮೌನವಾಗುಳಿದಿದ್ದಾಗಿ ತಿಳಿಸಿದ್ದಾರೆ.
ಒಕ್ಕೂಟವು ಪತ್ರಿಕಾಗೋಷ್ಠಿ ಪ್ರಕಟಿಸಿದ ನಂತರ ರಣವೀರ್ ತಂಡವು ಇಮೇಲ್ ಕಳುಹಿಸಿದ್ದು, ಈ ವೈಯಕ್ತಿಕ ಒಪ್ಪಂದದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು FWICE ಗೆ ಯಾವುದೇ ಕಾನೂನು ಅಧಿಕಾರ ವ್ಯಾಪ್ತಿ ಇಲ್ಲ ಎಂದು ವಾದಿಸಿದೆ.
ರಣವೀರ್ ಮುಂಬರುವ ಚಿತ್ರಗಳ ಮೇಲೆ ಬೀರುತ್ತಾ ಪರಿಣಾಮ?
FWICE ಒಕ್ಕೂಟದ ಅಡಿಯಲ್ಲಿ ಬರುವ 4 ಲಕ್ಷಕ್ಕೂ ಅಧಿಕ ತಂತ್ರಜ್ಞರು, ಲೈಟ್‌ಮ್ಯಾನ್‌ಗಳು ಮತ್ತು ಸ್ಪಾಟ್ ಬಾಯ್‌ಗಳು ರಣವೀರ್ ಸಿಂಗ್ ಅವರೊಂದಿಗೆ ಅಸಹಕಾರ ಪ್ರಕಟಿಸಿರುವುದರಿಂದ, ಅವರ ಮುಂಬರುವ ದೊಡ್ಡ ಬಜೆಟ್ ಚಿತ್ರಗಳಾದ ‘ಪ್ರಳಯ್’ ಮತ್ತು ‘ಚಂದ್ರಗುಪ್ತ ಮೌರ್ಯ’ ಚಿತ್ರೀಕರಣದ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ.



