November 2, 2026
Monday, November 2, 2026
spot_img

ಬಾಕ್ಸ್ ಆಫೀಸ್‌ನಲ್ಲಿ ‘ರಾಮಾಯಣ’ ಅಬ್ಬರ: ಬಿಡುಗಡೆಗೂ ಮುನ್ನವೇ ಟಿಕೆಟ್‌ಗೆ ಮುಗಿಬಿದ್ದ ಪ್ರೇಕ್ಷಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳ್ಳಿಪರದೆಯ ಮೇಲೆ ಭಾರತದ ಅತ್ಯಂತ ಭವ್ಯ ಮಹಾಕಾವ್ಯ ‘ರಾಮಾಯಣ’ ಕಥೆಯನ್ನು ಕಣ್ಣುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಈಗಿನಿಂದಲೇ ಟಿಕೆಟ್ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್ ಓಪನಿಂಗ್ ಸಿಕ್ಕಿದೆ.

ಬಾಲಿವುಡ್ ನಟ ರಣಬೀರ್ ಕಪೂರ್, ರಾಕಿ ಭಾಯ್ ಯಶ್, ಸಾಯಿ ಪಲ್ಲವಿ ಹಾಗೂ ರವಿ ದುಬೆ ಅವರಂತಹ ತಾರಾಗಣವಿರುವ ಈ ಚಿತ್ರವು ಪ್ರೀ-ಸೇಲ್ಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ದೇಶದ ಪ್ರಮುಖ ಮಲ್ಟಿಪ್ಲೆಕ್ಸ್ ಗಳಾದ PVR ಐನಾಕ್ಸ್ ಮತ್ತು ಸಿನೆಪೊಲಿಸ್‌ಗಳಲ್ಲಿ ಮೊದಲ ದಿನದ ಪ್ರದರ್ಶನಕ್ಕಾಗಿ ಈಗಾಗಲೇ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿವೆ.

ಚಿತ್ರದ ದೃಶ್ಯ ವೈಭವವನ್ನು ದೊಡ್ಡ ಪರದೆಯಲ್ಲಿ ನೋಡಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ. ಐಮ್ಯಾಕ್ಸ್ ಚಿತ್ರಮಂದಿರಗಳ ಪ್ರೈಮ್ ಸೀಟ್‌ಗಳು ಈಗಾಗಲೇ ಬುಕ್ ಆಗಿ ಮುಗಿದಿವೆ. ಸದ್ಯಕ್ಕೆ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾತ್ರ ಬುಕಿಂಗ್ ಆರಂಭವಾಗಿದ್ದು, ಏಕಪರದೆ ಚಿತ್ರಮಂದಿರಗಳು ಹಾಗೂ ದಕ್ಷಿಣ ಭಾರತದ ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಇನ್ನು ಕೆಲವೇ ಸಮಯದಲ್ಲಷ್ಟೇ ಅಡ್ವಾನ್ಸ್ ಬುಕಿಂಗ್ ತೆರೆದುಕೊಳ್ಳಲಿದೆ. ಅದು ಆರಂಭವಾದರೆ ಕಲೆಕ್ಷನ್ ಪ್ರಮಾಣ ದುಪ್ಪಟ್ಟಾಗುವುದರಲ್ಲಿ ಅನುಮಾನವಿಲ್ಲ.

ಈ ಬುಕಿಂಗ್ ಕ್ರೇಜ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಬಿಡುಗಡೆಗೆ ಮುಂಚಿನ ಸೋಮವಾರದಿಂದ ಹಿಡಿದು ಬುಧವಾರದವರೆಗಿನ ದಿನಗಳು ಯಾವುದೇ ಸಿನಿಮಾದ ಮುಂಗಡ ಬುಕಿಂಗ್‌ಗೆ ಅತ್ಯಂತ ನಿರ್ಣಾಯಕ. ‘ಧುರಂಧರ್: ದಿ ರಿವೇಂಜ್’ ನಂತಹ ದೊಡ್ಡ ಸಿನಿಮಾಗಳ ಬುಕಿಂಗ್ ದಾಖಲೆಗಳನ್ನು ಬದಿಗೊತ್ತಿ, ನಿತೇಶ್ ತಿವಾರಿ ನಿರ್ದೇಶನದ ಈ ಎಪಿಕ್ ಸಿನಿಮಾ ಭಾರತೀಯ ಚಲನಚಿತ್ರ ರಂಗದ ಸಾರ್ವಕಾಲಿಕ ಅತ್ಯುತ್ತಮ ಅಡ್ವಾನ್ಸ್ ಬುಕಿಂಗ್ ದಾಖಲೆಯನ್ನು ತನ್ನದಾಗಿಸಿಕೊಳ್ಳುವತ್ತ ಧಾವಿಸುತ್ತಿದೆ.

ಒಟ್ಟಿನಲ್ಲಿ, ‘ರಾಮಾಯಣ’ ಚಿತ್ರವು ಬಿಡುಗಡೆಗೆ ಮುನ್ನವೇ ಸೃಷ್ಟಿಸಿರುವ ಈ ಹವಾ ನೋಡಿದರೆ, ಚಿತ್ರಮಂದಿರಗಳಲ್ಲಿ ದಾಖಲೆಗಳ ಸುರಿಮಳೆಯಾಗುವುದು ಖಚಿತವಾಗಿದೆ.

Must Read