ಹೊಸದಿಗಂತ ವರದಿ ಚಿತ್ರದುರ್ಗ:
ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸುವ ಕುರಿತು ಕರ್ನಾಟಕ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆಯ ಪ್ರತಿಯನ್ನು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಬಿಡುಗಡೆಗೊಳಿಸಿದರು.
ರಾಜ್ಯಾದ್ಯಂತ ಹಸ್ತಪ್ರತಿಗಳ ಸಂರಕ್ಷಣೆ ಕಾರ್ಯ
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜ್ಞಾನ ಭಾರತಂ ಮಿಷನ್ ಸಂಯುಕ್ತಾಶ್ರಯದಲ್ಲಿ ರಾಜ್ಯಾದ್ಯಂತ ಹಸ್ತಪ್ರತಿಗಳ ಸಂರಕ್ಷಣೆ ಕಾರ್ಯ ಪ್ರಾರಂಭಗೊಂಡಿದ್ದು, ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ದಾಖಲೆಗಳನ್ನು ಇಂದಿನ ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಸಮೀಕ್ಷೆ, ಸಂರಕ್ಷಣೆ, ಡಿಜಿಟಲೀಕರಣ, ನೊಂದಣಿ, ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆ ಮಾಡಲಾಗುವುದು ಎಂದರು.
ಜ್ಞಾನ ಸಂಪತ್ತನ್ನು ಭವಿಷ್ಯಕ್ಕೆ ಉಳಿಸುವ ಯೋಜನೆ
ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆಯ ಮೂಲಕ ಸಾರ್ವಜನಿಕ ಪ್ರವೇಶಕ್ಕೆ ಒದಗಿಸಿ, ಭವಿಷ್ಯದ ಪೀಳಿಗೆಗೆ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ದೇಶದಲ್ಲಿರುವ ಹಸ್ತಪ್ರತಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ರಾಷ್ಟ್ರೀಯ ಭಂಡಾರದ ದತ್ತಾಂಶವನ್ನು ವಿಶ್ವದೊಂದಿಗೆ ಹಂಚಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.
ಸಾರ್ವಜನಿಕರಿಗೆ ಮನವಿ
ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಕರ್ನಾಟಕದ ಪ್ರಾಚೀನ ಹಸ್ತಪ್ರತಿಗಳ ಸಮೀಕ್ಷೆ 2026ರ ಮಾರ್ಚ್‌ನಿಂದ ಮೇ ತಿಂಗಳವರೆಗೆ ನಡೆಯಲಿದೆ. ಮಠ-ಮಾನ್ಯಗಳು, ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮನೆಗಳಲ್ಲಿ ಸಂಗ್ರಹವಾಗಿರುವ ಹಸ್ತಪ್ರತಿಗಳನ್ನು ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅಪ್‌ಲೋಡ್ ಮಾಡಬಹುದು ಅಥವಾ ಇಲಾಖೆಯ ಗಮನಕ್ಕೆ ತರಬಹುದು ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಪ್ರಹ್ಲಾದ್ ಮನವಿ ಮಾಡಿದ್ದಾರೆ.
ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ರೆಡ್ಡಿ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಮೊ. 99643 57859, 94491 45557 ಹಾಗೂ ಇತಿಹಾಸ ಸಂಶೋಧಕ ಡಾ. ಬಿ. ರಾಜಶೇಖರಪ್ಪ ಅವರ 94802 26064 ಸಂಖ್ಯೆಯನ್ನು ಸಂಪರ್ಕಿಸಬಹುದು.



