ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದೆ. ದೆಹಲಿ ಪ್ರವಾಸ ಮುಗಿಸಿ ಬಂದಿರುವ ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಲಿದ್ದು, ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಇದರ ನಡುವೆ ಡಿ.ಕೆ. ಶಿವಕುಮಾರ್ ಸಿಎಂ ಆದಲ್ಲಿ ತಮ್ಮ ರಾಜಕೀಯ ಭವಿಷ್ಯ ಬದಲಾಗಬಹುದು ಎಂಬ ಆತಂಕದಲ್ಲಿರುವ ಆಪ್ತ ಸಚಿವರು ಸಿದ್ದರಾಮಯ್ಯ ಪರವಾಗಿ ಶಾಸಕರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಹೈಕಮಾಂಡ್ ಮಾತಿಗೆ ಗೌರವ:
ಸಿದ್ದರಾಮಯ್ಯರನ್ನು ಭೇಟಿಯಾದ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿಗಳು ಪಕ್ಷದ ಹೈಕಮಾಂಡ್‌ಗೆ ನೀಡಿರುವ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಇನ್ನು ಇದೇ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಇತರ ನಾಯಕರೊಂದಿಗೆ ಸಿಎಂ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದರಾದರೂ, ನಾಯಕತ್ವ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿಗಳು ಏನೂ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಇಂದು ರಾಜ್ಯಪಾಲರ ಭೇಟಿಗೆ ಸಮಯಾವಕಾಶ:
ಇಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದ ನಂತರ ಸಿದ್ದರಾಮಯ್ಯ ತಮ್ಮ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅವರು ಇಂದು ಮಧ್ಯಾಹ್ನ 3 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದಾರೆ.
ಇದನ್ನೂ ಓದಿ:
ಡಿಕೆಶಿ ಸಿಎಂ ಆಗುವ ಆತಂಕದಲ್ಲಿ ಸಚಿವರು:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ತಮ್ಮ ರಾಜಕೀಯ ಭವಿಷ್ಯ ಏನಾಗಬಹುದು ಎಂಬ ಆತಂಕದಲ್ಲಿರುವ ಬಹುತೇಕ ಸಚಿವರು, ನಾವು ನಿಮ್ಮ ಪರವಾಗಿ ಶಾಸಕರ ಸಹಿ ಸಂಗ್ರಹಿಸಿ ಪಕ್ಷದ ಹೈಕಮಾಂಡ್‌ಗೆ ಕಳುಹಿಸುತ್ತೇವೆ, ನೀವು ರಾಜೀನಾಮೆ ನೀಡಬೇಡಿ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸಚಿವರಾದ ಜಮೀರ್ ಅಹಮದ್ ಖಾನ್, ಡಾ. ಎಚ್.ಸಿ. ಮಹದೇವಪ್ಪ, ಡಾ. ಎಂ.ಸಿ. ಸುಧಾಕರ್, ಸಂತೋಷ್ ಲಾಡ್, ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪುರ, ಕೆ.ಜೆ. ಜಾರ್ಜ್ ಮತ್ತು ಕೆ. ವೆಂಕಟೇಶ್ ಸಭೆ ನಡೆಸಿ ಚರ್ಚಿಸಿದ್ದಾರೆ.
ಹೋಮ-ಹವನ ನಡೆಸಿದ ಪರಮೇಶ್ವರ್:
ಇದೇ ವೇಳೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬುಧವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ‘ಹೋಮ ಮತ್ತು ಹವನ’ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಅವರು ಸಿಎಂ ಆಗುವ ಭರವಸೆಯಲ್ಲಿದ್ದು, ಕಳೆದ ಐದು ದಿನಗಳಿಂದ ಈ ಆಚರಣೆಗಳು ನಡೆಯುತ್ತಿವೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.



