ಹೊಸದಿಗಂತ ವರದಿ ಬೆಳಗಾವಿ:
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಬಳಿ ನಡೆದಿದೆ.
ಮಜಗಾವಿ ನಿವಾಸಿಯಾದ ರಾಹುಲ್ ತಳವಾರ (22) ಕೊಲೆಯಾದ ದುರ್ದೈವಿ ಯುವಕ.
ಮೃತ ರಾಹುಲ್ ತಳವಾರನನ್ನು ಕೆಲವು ಯುವಕರ ಗುಂಪು ಹುಂಚ್ಯಾನಟ್ಟಿ ಗ್ರಾಮದ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ. ಅಲ್ಲಿ ಪೂರ್ವಾಪರ ದ್ವೇಷದ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದು, ತಲ್ವಾರ್ ಸೇರಿದಂತೆ ಮಾರಕಾಸ್ತ್ರಗಳಿಂದ ರಾಹುಲ್ ಮೇಲೆ ಯುವಕರು ಭೀಕರವಾಗಿ ದಾಳಿ ಮಾಡಿದ್ದಾರೆ.
ಇದನ್ನೂ ಓದಿ:
ರಾಹುಲ್ ಅವರ ತಲೆ ಹಾಗೂ ಕೈ ಭಾಗಗಳಿಗೆ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಹುಲ್ನನ್ನು ತಕ್ಷಣವೇ ಸ್ಥಳೀಯರು ಮತ್ತು ಪರಿಚಿತರು ಚಿಕಿತ್ಸೆಗಾಗಿ ನಗರದ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಆಸ್ಪತ್ರೆಯಲ್ಲೇ ಸಾವನಪ್ಪಿದ್ದಾನೆ.
ಹಳೇ ದ್ವೇಷವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



