August 3, 2026
Monday, August 3, 2026
spot_img

ಯೆಡಕುಮೇರಿ ಹಳಿಯ ಮೇಲಿನ ಮಣ್ಣು ತೆರವು ಕಾರ್ಯ ಪೂರ್ಣ: ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ರೈಲು ಓಡಾಟ ಮತ್ತೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಹಾಸನ ಜಿಲ್ಲಾ ವ್ಯಾಪ್ತಿಯ ಎಡಕುಮೇರಿ-ಸಿರಿಬಾಗಿಲು ನಡುವೆ ರೈಲು ಹಳಿಯ ಮೇಲೆ ಭೂ ಕುಸಿತವಾಗಿ ಹಳಿಯ ಮೇಲೆ ಬಿದ್ದಿದ್ದ ಮಣ್ಣನ್ನು ಸೋಮವಾರ ಸಂಪೂರ್ಣ ತೆರವುಗೊಳಿಸಲಾಗಿದ್ದು, ಹಳಿ ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮುಂದೆ ನಿಗದಿತ ಸಮಯದ ವೇಳಾಪಟ್ಟಿಯಂತೆ ಎಲ್ಲಾ ರೈಲುಗಳ ಸಂಚಾರ ನಡೆಸಲಿದೆ ಎಂದು ಮೈಸೂರು ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕಾನಮಡಿ ತಿಳಿಸಿದ್ದಾರೆ.

ರೈಲು ಸಂಖ್ಯೆ 17378 ಯಶಸ್ವಿಯಾಗಿ ಓಡಾಟ

ಹಳಿಗಳ ಮೇಲಿದ್ದ ಮಣ್ಣನ್ನು ಯಶಸ್ವಿಯಾಗಿ ತೆರವುಗೊಳಿಸಿದ ನಂತರ, ಮೈಸೂರು ವಿಭಾಗದ ಸಿರಿಬಾಗಿಲು – ಯೆಡಕುಮೇರಿ ವಿಭಾಗದಲ್ಲಿ ರೈಲು ಸೇವೆಗಳು ಅಧಿಕೃತವಾಗಿ ಪುನರಾರಂಭಗೊಂಡಿದೆ. ರೈಲು ಸಂಖ್ಯೆ 17378 ಈ ಮಾರ್ಗದ ಮರುಸಂಚಾರಕ್ಕೆ ಚಾಲನೆ ಸಿಕ್ಕಿದ್ದು, ಕಿ.ಮೀ 73/700–500 ರ ವ್ಯಾಪ್ತಿಯಲ್ಲಿರುವ ಬಾಧಿತ ಪ್ರದೇಶದ ಮೂಲಕ ಸುರಕ್ಷಿತವಾಗಿ ಹಾದುಹೋಯಿತು.

ವೇಗದ ಮಿತಿ ಅಳವಡಿಕೆ:

ಹಳಿ ದುರಸ್ತಿ ಯಶಸ್ವಿಯಾಗಿ ಪುನಃಸ್ಥಾಪಿಸಿದ್ದರೂ, ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮುನ್ನೆಚ್ಚರಿಕೆ ಕ್ರಮವಾಗಿ ಗಂಟೆಗೆ 10 ಕಿ.ಮೀ ವೇಗದ ಮಿತಿಯನ್ನು ತಾತ್ಕಾಲಿಕವಾಗಿ ವಿಧಿಸಲಾಗಿದೆ. ಈ ವಿಭಾಗದಲ್ಲಿ ಸಂಚರಿಸುವಾಗ ರೈಲು ಸಿಬ್ಬಂದಿ ಹೆಚ್ಚಿನ ಜಾಗರೂಕತೆಯನ್ನು ವಹಿಸಲಿದ್ದಾರೆ. ಜೊತೆಗೆ, ಭೂಕುಸಿತದ ನಂತರದ ದುರಸ್ತಿ ಮತ್ತು ಮರುಸ್ಥಾಪನಾ ಕಾರ್ಯಗಳು ಮುಂದುವರಿದಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

೪೮ ಗಂಟೆಗಳ ಅಹರ್ನಿಶಿ ಶ್ರಮ:

ಸುಮಾರು ೪೮ ಗಂಟೆಗಳ ಕಾಲದ ನಿರಂತರ ಶ್ರಮದ ಬಳಿಕ ಸುಮಾರು 50 ಮೀಗೂ ಅಧಿಕ ಉದ್ದದಲ್ಲಿ ಬೃಹತ್ ಗಾತ್ರದಲ್ಲಿ ಹಳಿಯ ಮೇಲಿದ್ದ ಮಣ್ಣನ್ನು ತೆರವುಗೊಳಿಸಲಾಗಿದೆ. ಶನಿವಾರ ರಾತ್ರಿಯಿಂದ ಸೋಮವಾರ ರಾತ್ರಿ ತನಕ ನಿರಂತರ ಮಳೆಯ ನಡುವೆ ಅಹರ್ನಿಶಿಯಾಗಿ ನಿರಂತರ ಸಮರೋಪಾದಿಯ ಕಾರ್ಯಾರಣೆಯನ್ನು ರೈಲ್ವೆ ಇಲಾಖೆ ಕಾರ್ಮಿಕರು ನಡೆಸಿದ್ದರು. ಕಾರ್ಮಿಕರು, ಜೆಸಿಬಿ ಯಂತ್ರಗಳು, ಹಿತಾಚಿಗಳು ನಿರಂತರವಾಗಿ ಶ್ರಮವಹಿಸಿ ಹಳಿಯ ಮೇಲೆ ಬಿದ್ದಿದ್ದ ಬೃಹತ್ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಬಳಿಕ ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ ರೈಲ್ವೆ ಇಲಾಖಾಧಿಕಾರಿಗಳು ಗುಣ ಮಟ್ಟ ಪರೀಕ್ಷೆ ನಡೆಸಿ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿತು. ರೈಲ್ವೆ ಅಧಿಕಾರಿಗಳು ಮತ್ತು ಇಂಜೀನಿಯರ್‌ಗಳು ಪ್ರಾಯೋಗಿಕ ಸಂಚಾರ ನಡೆಸಿ ರೈಲು ಪ್ರಯಾಣಕ್ಕೆ ಅನುಮತಿ ನೀಡಿದರು.

ರೈಲ್ವೆ ಡಿಆರ್‌ಎಂ ಭೇಟಿ:

ಘಟನಾ ಸ್ಥಳಕ್ಕೆ ಮೈಸೂರು ವಿಭಾಗದ ಡಿಆರ್‌ಎಂ ಮುದಿತ್ ಮಿತ್ತಲ್ ಸೋಮವಾರ ಭೇಟಿ ನೀಡಿ ಕಾರ್ಯಾಚರಣೆಯನ್ನೂ ಪರಿಶೀಲಿಸಿ ಅಲ್ಲಿದ್ದ ಅಧಿಕಾರಿಗಳಿಗೆ ಹಾಗೂ ಇಂಜೀನಿಯರ್‌ಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಅಲ್ಲದೆ ಘಾಟ್ ಪ್ರದೇಶದಲ್ಲಿನ ಹಳಿಗಳನ್ನು ಮತ್ತು ಗುಡ್ಡದ ಪರಿಸರಗಳನ್ನು ಪರಿಶೀಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !