ಹೊಸ ದಿಗಂತ ವರದಿ,ಹುಬ್ಬಳ್ಳಿ:
ರಾಜ್ಯ ಐದು ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ನಾಮಕರಣ ಹಾಗೂ ಕಳಸಾ ಬಂಡೂರಿ, ಮಹದಾಯಿ ಯೋಜನೆ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿ ಮೇ 30 ರಂದು ಬೆಳಿಗ್ಗೆ 10 ಗಂಟೆಗೆ ನಗರದಲ್ಲಿ ನಾಮಕರಣ ಚಳವಳಿಯನ್ನು ಮಹದಾಯಿ ಕಳಸಾ ಬಂಡೂರಿ ಚಳವಳಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಚಳವಳಿಯ ಸಂಚಾಲಕ ಶಿವಾನಂದ ಮುತ್ತಣ್ಣವರ ತಿಳಿಸಿದರು.
ಮಹದಾಯಿ ಹಾಗೂ ರಾಜ್ಯದ ೫ ವಿಮಾನ ನಿಲ್ದಾಣಗಳಿಗೆ ಕನ್ನಡದ ಮಹನೀಯರ ಹೆಸರು ನಾಮಕರಣ ಹಾಗೂ ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಹಲವು ಹೋರಾಟ, ಮನವಿಗಳನ್ನು ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂದು ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಚನ್ನಮ್ಮ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆಯಲ್ಲಿ ಚಿಟಗುಪ್ಪಿ ಆಸ್ಪತ್ರೆ ಬಳಿ ಇರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕಚೇರಿಗೆ ತೆರಳಿ, ಮನವಿ ಸಲ್ಲಿಸಲಾಗುವುದು. ಕನ್ನಡ ಚಲನಚಿತ್ರ ರಂಗದ ಹಲವಾರು ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ರ್ಟಮಿನಲ್‌ಗೆ ರಾಜ್ ಕುಮಾರ್ ಹೆಸರು
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ, ಬೆಳಗಾವಿ- ನಿಲ್ದಾಣಕ್ಕೆ ಕಿತ್ತೂರು ಚನ್ನಮ್ಮ, ಶಿವಮೊಗ್ಗ- ಏರ್‌ಪೋರ್ಟ್‌ಗೆ ರಾಷ್ಟ್ರಕವಿ ಕುವೆಂಪು, ವಿಜಯಪುರ- ವಿಮಾ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು ನಾಮಕಾರಣ ಮಾಡಬೇಕು. ಬೆಂಗಳೂರಿನ ೨ನೇ ರ್ಟಮಿನಲ್‌ಗೆ ಡಾ. ರಾಜಕುಮಾರ ಅವರ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ಯೋಜನೆಗಳ ನಿರ್ಲಕ್ಷ್ಯ
ರೈತ ಹೋರಾಟಗಾರ ಹೇಮನಗೌಡ ಬಸನಗೌಡರ ಮಾತನಾಡಿ, ಮಹದಾಯಿ, ಕಳಸಾ- ಬಂಡೂರಿ ಯೋಜನೆ ಕೇಂದ್ರ ಅರಣ್ಯ ಇಲಾಖೆಯು ಯೋಜನೆಯ ಕಡತವನ್ನು ರಾಜ್ಯ ಸರ್ಕಾರಕ್ಕೆ ವಾಪಸ್ಸು ಕಳಿಸಿರುವುದು ಸರಿ ಅಲ್ಲ. ಈ ವಿಚಾರದಲ್ಲಿ ಪ್ರಧಾನಿ ಅವರು ಗಂಭೀರವಾಗಿ ಪರಿಗಣಿಸಿಲ್ಲ. ಈ ಭಾಗದ ಪ್ರಮುಖ ಕುಡಿಯುವ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಯೋಜನೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಮಲ್ಲಿಕಾರ್ಜುನ ತಾಲೂರ, ಬಸವರಾಜ ಅಗಸಿಮನಿ, ವೆಂಕಟೇಶ ಸಟ್ಟಿ, ಪಾಂಡು ಭಜಂತ್ರಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.



