ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ದಕ್ಷಿಣ ಭಾಗದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಸೌತ್ ದೆಹಲಿಯ ಪ್ರಸಿದ್ಧ ಸಾಕೇತ್ ಮೆಟ್ರೋ ನಿಲ್ದಾಣದ ಅತ್ಯಂತ ಸಮೀಪದಲ್ಲಿದ್ದ ಐದು ಅಂತಸ್ತಿನ ವಾಣಿಜ್ಯ ಕಟ್ಟಡವೊಂದು ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಇದುವರೆಗೆ 12 ಜನರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಭೀತಿ ಎದುರಾಗಿದೆ.
ರಾತ್ರಿ ವೇಳೆ ಸಂಭವಿಸಿದ ಅವಘಡ:
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಶನಿವಾರ ರಾತ್ರಿ ಸುಮಾರು 7:45ರ ವೇಳೆಗೆ ಈ ಘಟನೆ ನಡೆದಿದೆ. ಕುಸಿದು ಬಿದ್ದ ಐದು ಅಂತಸ್ತಿನ ಈ ದೊಡ್ಡ ಕಟ್ಟಡದ ನೆಲಮಹಡಿಯಲ್ಲಿ ಖಾಸಗಿ ಕೋಚಿಂಗ್ ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಇನ್ನುಳಿದ ಮೇಲಿನ ಮೂರು ಮಹಡಿಗಳಲ್ಲಿ ವಿವಿಧ ಕಚೇರಿಗಳು ಹಾಗೂ ಕೆಫೆಗಳು ಇದ್ದವು ಎನ್ನಲಾಗಿದೆ. ದುರಂತದ ಸಮಯದಲ್ಲಿ ಮೂರನೇ ಮಹಡಿಯಲ್ಲಿ ಕೆಲವು ನಿರ್ಮಾಣ ಕಾಮಗಾರಿಗಳು ಸಹ ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಕೋಚಿಂಗ್ ಸೆಂಟರ್ ಇದ್ದ ಕಾರಣ, ಅವಶೇಷಗಳ ಅಡಿಯಲ್ಲಿ ವಿದ್ಯಾರ್ಥಿಗಳು ಸಿಲುಕಿರುವ ಸಾಧ್ಯತೆ ಹೆಚ್ಚಾಗಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.
12 ಜನರ ರಕ್ಷಣೆ, ಇಬ್ಬರ ಸ್ಥಿತಿ ಗಂಭೀರ:
ಕಟ್ಟಡ ಕುಸಿದ ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಕಾಂಕ್ರೀಟ್ ರಾಶಿಯಡಿ ಸಿಲುಕಿದ್ದ 12 ಜನರನ್ನು ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರ ಪೈಕಿ ಇಬ್ಬರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ- ಸಿಎಂ ಕಳವಳ:
ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು, ಸಿಲುಕಿರುವವರನ್ನು ತಕ್ಷಣ ರಕ್ಷಿಸಲು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ದೆಹಲಿ ಪೊಲೀಸ್ ತಂಡಗಳು ಜಂಟಿಯಾಗಿ ಮೊಕ್ಕಾಂ ಹೂಡಿವೆ. ಜೆಸಿಬಿ ಹಾಗೂ ಅತ್ಯಾಧುನಿಕ ಭಾರೀ ಯಂತ್ರೋಪಕರಣಗಳ ಸಹಾಯದಿಂದ ಕಾಂಕ್ರೀಟ್ ಹಟ್ಟೆಗಳನ್ನು ಸರಿಸಿ, ಒಳಗೆ ಸಿಲುಕಿರುವವರನ್ನು ಹೊರತರಲು ಯುದ್ಧೋಪಾದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.



