ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಸೀಸನ್-19 ರ ರೋಮಾಂಚಕ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್ಸಿಬಿ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಬೌಲರ್‌ಗಳ ಅದ್ಭುತ ಪ್ರದರ್ಶನ:
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬೆಂಗಳೂರು ತಂಡದ ನಿರ್ಧಾರ ಸಫಲವಾಯಿತು. ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ ಕೇವಲ 155 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ತಂಡದ ಪ್ರಮುಖ ಮೂವರು ಬ್ಯಾಟರ್‌ಗಳನ್ನು ಬೇಗನೆ ಔಟ್ ಮಾಡುವ ಆರ್ಸಿಬಿ ತಂತ್ರ ಯಶಸ್ವಿಯಾಯಿತು. ಭುವನೇಶ್ವರ್ ಕುಮಾರ್, ರಾಸಿಖ್ ಸಲಾಮ್, ಜೋಶ್ ಹೇಝಲ್‌ವುಡ್, ಸುಯಶ್ ಶರ್ಮಾ, ರೊಮಾರಿಯೋ ಶೆಫರ್ಡ್ ಮತ್ತು ಕೃನಾಲ್ ಪಾಂಡ್ಯ ಒಳಗೊಂಡ ಬೌಲಿಂಗ್ ಪಡೆ ಇಡೀ ಟೂರ್ನಿಯುದ್ದಕ್ಕೂ ಪ್ರಮುಖ ಪಾತ್ರ ವಹಿಸಿದೆ ಎಂದು ನಾಯಕ ರಜತ್ ಪಾಟಿದಾರ್ ಶ್ಲಾಘಿಸಿದ್ದಾರೆ.
ಸುಲಭ ಚೇಸಿಂಗ್, ಭಾವುಕರಾದ ಪಾಟಿದಾರ್:
156 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ 18 ಓವರ್‌ಗಳಲ್ಲೇ ಗೆಲುವಿನ ನಗೆ ಬೀರಿದೆ. ಐತಿಹಾಸಿಕ ಗೆಲುವಿನ ಬಳಿಕ ಮಾತನಾಡಿದ ನಾಯಕ ರಜತ್ ಪಾಟಿದಾರ್, “ನಾನು ಆರ್ಸಿಬಿ ತಂಡ ಮುನ್ನಡೆಸಿ ಟ್ರೋಫಿ ಗೆಲ್ಲುತ್ತೇನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಇದೆಲ್ಲವೂ ಹಣೆಬರಹ, ಈ ಅವಕಾಶ ಸಿಕ್ಕಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ” ಎಂದು ಭಾವುಕರಾದರು. 2025ರ ಐಪಿಎಲ್ ಫೈನಲ್‌ನಲ್ಲಿ ಮೊದಲ ಟ್ರೋಫಿ ಗೆಲ್ಲುವ ಒತ್ತಡವಿತ್ತು, ಆದರೆ ಈ ಬಾರಿ ತಂಡದಲ್ಲಿದ್ದ ಅದ್ಭುತ ಫಾರ್ಮ್ ಯಾವುದೇ ಒತ್ತಡವಿಲ್ಲದೆ ಆಡಲು ಸಹಾಯ ಮಾಡಿತು ಎಂದರು.
ವಿರಾಟ್ ಕೊಹ್ಲಿ ಬೆಂಬಲ ಮತ್ತು ಫ್ಯಾನ್ಸ್ ಕ್ರೇಜ್:
ತಂಡದ ಯುವ ಆಟಗಾರರ ಹಿಂಜರಿಕೆಯನ್ನು ದೂರ ಮಾಡಿ, ಅವರಿಗೆ ಸದಾ ಬೆಂಬಲ ನೀಡುವ ವಿರಾಟ್ ಕೊಹ್ಲಿ ಅವರ ಗುಣವನ್ನು ಪಾಟಿದಾರ್ ಕೊಂಡಾಡಿದರು. ಕೊನೆಯದಾಗಿ, ದೇಶದ ಪ್ರತಿ ಮೈದಾನವನ್ನೂ ಚಿನ್ನಸ್ವಾಮಿ ಸ್ಟೇಡಿಯಂನಂತೆ ಬದಲಾಯಿಸಿದ ಆರ್ಸಿಬಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅವರು, “ಈ ಕಪ್ ನಿಮ್ಮದೇ… ಈ ಸಲನೂ ಕಪ್ ನಮ್ಮದೇ” ಎಂದು ವಿಶ್ವಾಸದ ಮಾತುಗಳೊಂದಿಗೆ ಸಂಭ್ರಮಿಸಿದರು.



