ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಸಾವಿರಾರು ವರ್ಷಗಳಷ್ಟು ಪುರಾತನ ಕಲ್ಲಿನ ವಿಗ್ರಹವು ಇದೀಗ ನಿಧಾನವಾಗಿ ಸವೆದು ಹೋಗುತ್ತಿರುವ ಹಿನ್ನೆಲೆಯಲ್ಲಿ, ಭಕ್ತರು ವಿಗ್ರಹವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುವುದನ್ನು ನಿಷೇಧಿಸಿಸಲಾಗಿದೆ.
ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತೆ ಸುಧಾ ತಲವಾರ ಆದೇಶ ಹೊರಡಿಸಿದ್ದು, ದೇವಸ್ಥಾನದ ಅರ್ಚಕರು ಹಾಗೂ ಸಾರ್ವಜನಿಕರ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಅವರು, ಶಿಫ್ಟ್ ಇನ್‌ಚಾರ್ಜ್ ಅರ್ಚಕರನ್ನು ಹೊರತುಪಡಿಸಿ ಇತರ ಯಾವುದೇ ಅರ್ಚಕರು, ವಿಐಪಿಗಳು ಅಥವಾ ಭಕ್ತರಿಗೆ ಗರ್ಭಗುಡಿಯೊಳಗೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಭಕ್ತರು ವಿಗ್ರಹಕ್ಕೆ ಅಭಿಷೇಕ ಮಾಡುವುದಾಗಲಿ ಅಥವಾ ಸ್ಪರ್ಶಿಸುವುದಾಗಲಿ ನಿಷೇಧಿಸಲಾಗಿದೆ. ಅವರು ದೂರದಿಂದಲೇ ದೇವರ ದರುಶನ ಪಡೆಯಬಹುದು ಎಂದು ತಿಳಿಸಿದರು.
ಆರತಿಯನ್ನು ಗರ್ಭಗುಡಿಯ ಹೊರಗಡೆಯಿಂದಲೇ ನೆರವೇರಿಸಬಹುದು. ಮುಂದಿನ ಆದೇಶದವರೆಗೆ ಈ ನಿರ್ಬಂಧಗಳು ಜಾರಿಯಲ್ಲಿರಲಿವೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ವಿಗ್ರಹವು ನಿರಂತರ ಸ್ಪರ್ಶದಿಂದ ಸವೆದು ಹೋಗುತ್ತಿರುವುದರಿಂದ, ವಿಗ್ರಹವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುವುದು ಮತ್ತು ದರುಶನ ಪಡೆಯುವುದನ್ನು ನಿಷೇಧಿಸಬೇಕು ಎಂದು ಸ್ಥಳೀಯ ನಿವಾಸಿಗಳು ಸೇರಿದಂತೆ ಅನೇಕ ಭಕ್ತರು ಬೇಡಿಕೆ ಸಲ್ಲಿಸಿದ್ದರು. ಅಂತೆಯೇ ಇದೀಗ ಗೋಕರ್ಣ ಮಹಾಗಣಪತಿಯನ್ನು ಸ್ಪರ್ಶಿಸಿ ಪೂಜೆ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ.



